Friday, October 5, 2007

ನಾವು ಎಷ್ಟಂದ್ರೂ ಅಷ್ಟೆ ಬಿಡಿ!



ಈ ಬಾರಿ ಯಾವುದೇ ಮ್ಯಾಗಜೀನ್ ತೆಗೆದು ನೋಡಿ. ಕ್ರಿಕೆಟ್ ಸುದ್ದಿ ಇಲ್ಲದೆ ಇದ್ರೆ ಕೇಳಿ. ಧೋನಿ ಕೈಯಲ್ಲಿ ಲಕ ಲಕ ಮಿಂಚುತ್ತಾ ಇರೋ ಟ್ವೆಂಟಿ-20 ವಿಶ್ವ ಕಪ್. ಒಂದರಲ್ಲಿ 'ಹ್ಯಾಟ್ಸಾಫ್ ಯಂಗ್ ಹಾರ್ಟ್ಸ್' ಅಂತಿದ್ದರೆ, ಇನ್ನೊಂದು ಕಡೆ 'ಶಹಭಾಸ್ ಟೀಮ್ ಇಂಡಿಯಾ' . ಮತ್ತೊಂದರಲ್ಲಿ '24 ವರ್ಷಗಳ ನಂತರ ವಿಜಯೋತ್ಸವ!' 'ಔಟ್ ಲುಕ್' ಅಂತೂ ವಿಶೇಷ ಸಂಚಿಕೆಗಳ ಮಧ್ಯದ ಪೇಜ್ ಇರುವಂತೆ ಒಂದು ಮಿರುಗುವ ದೊಡ್ಡ ಪೇಜ್ ಇಡೀ ಧೋನಿ ಪಡೆಯ ಫೋಟೋ ಹಾಕಿಬಿಟ್ಟಿತ್ತು! ಯಪ್ಪಾ..!

ವಿಶ್ವಕಪ್ ಗೆದ್ದಿರುವುದು ಖಂಡಿತ ಚಿಕ್ಕ ಸಾಧನೆಯಲ್ಲ. ಒಪ್ಪಿಕೊಳ್ಳೋಣ. ಆದರೆ ಒಂದು ಜಯದ ನಂತರ ಉಬ್ಬಿಹೋಗಿ ಮುಂದಿನ ಕರ್ತವ್ಯ ಮರೆಯುವುದರಲ್ಲಿ ನಾವು ನಿಸ್ಸೀಮರು. ಹೆಚ್ಚ್ಯಾಕೆ? ಟ್ವೆಂಟಿ-20ಯಲ್ಲಿ ಆಸ್ಟ್ರೇಲಿಯಾ ಸದೆ ಬಡಿದ ಇದೇ 'ಟೀಮ್ ಇಂಡಿಯಾ' ಈಗ ಆಸ್ಟ್ರೇಲಿಯಾ ಕೈಯಿಂದಲೇ ಹೊಡೆಸಿಕೊಳ್ಳುತ್ತಿದೆ. ಈ ಮೀಡಿಯಾಗಳೇ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಕೊಟ್ಟುಬಿಡುತ್ತವೆ ಅನ್ನೋದು ಖಂಡಿತ ಸುಳ್ಳಲ್ಲ. ಆದರೆ ಹಾಕಿಯಲ್ಲಿ ಭಾರತ ತಂಡ ಕೊರಿಯಾವನ್ನು 7-2 ರಿಂದ ಸದೆ ಬಡಿದಾಗ, ಫುಟ್ಬಾಲ್ನಲ್ಲಿ ನೆಹರೂ ಕಪ್ ಜಯಿಸಿ ಬಂದಾಗ ಇದೇ ಪ್ರಚಾರ ಯಾಕೆ ಸಿಕ್ಕಿಲ್ಲ?

ಇನ್ನು ನ್ಯೂಸ್ ಚಾನೆಲ್ ಕಥೆ ಕೇಳಲೇ ಬೇಡಿ. ಭಾರತಕ್ಕೆ ಮರಳಿದ ಕ್ರಿಕೆಟ್ ತಂಡಗಳ ಮೆರವಣಿಗೆಯನ್ನು ದಿನವಿಡೀ ಪ್ರಸಾರ ಮಾಡಿದ್ದವು. ಅವೇ ಚಾನೆಲ್ ಗಳು ಐಶ್-ಅಭಿ ಮದುವೆ ಸಂದರ್ಭವೂ ಹೀಗೆ ಮಾಡಿದ್ದವು. ನಾವು ಎಷ್ಟೇ ಬಡ್ಕೊಂಡ್ರೂ ಏನೂ ಆಗಲ್ಲ ಬಿಡಿ. ಯಾಕೆಂದ್ರೆ ಎಷ್ಟೇ ಹೇಳಿದ್ರೂ ನಮಗೂ ಇಂತಹ ಸುದ್ದಿಗಳೇ ಬೇಕಾಗಿರುವುದು. ಐಶ್ ಮದುವೆಗೆ ಕೆಂಪು ಸೀರೆ ಉಟ್ಟಿದ್ದೋ, ಹಸಿರೋ ಎನ್ನುವುದು ಕಾಶ್ಮೀರದಲ್ಲಿ ಮಡಿಯುತ್ತಿರುವ ಯೋಧರಿಗಿಂತ ಹೆಚ್ಚು ಮುಖ್ಯ ನಮಗೆ. ಅಯ್ಯೋ, ಈ ರಗಳೆ ಎಲ್ಲಾ ಯಾಕೆ, ಬಿಟ್ ಹಾಕಿ ಅಂದು ಸುಮ್ಮನಾದ್ರಾ?

4 comments:

Unknown said...

ನೀವೇಳಿದ್ದು ಅಕ್ಷರಶಃ ನಿಜ, ಅಷ್ಟೆಲ್ಲಾ ಧಾಂ ಧೂಂ ಪ್ರಚಾರದ ಮೆರವಣಿಗೆಯ ಅಗತ್ಯ ಖಂಡಿತಾ ಇರಲಿಲ್ಲ ಅಂತ ನನಗೂ ಅನ್ನಿಸಿತ್ತು. ಏನು ಪ್ರಚಾರ ಏನು ಮೆರವಣಿಗೆ... ಏನು ಕಥೇ! ನಮ್ಮ ಮಾಧ್ಯಮಗಳಿಗೆ ತಲೆ ಕೆಟ್ಟಿದೆಯೇ ಅಂತಾನೇ ಅನುಮಾನ ಬರಕ್ಕೆ ಶುರುವಾಗಿದೆ. ಪೇಪರ್ಗಳು ವಾರಪತ್ರಿಕೆಗಳು ಪೇಜುಗಟ್ಟಲೆ ಸುದ್ದಿ ಬರೆದು ತಂಡದ ದೊಡ್ಡ ಫೋಟೋ ಹಾಕಿಕೊಂಡರೆ ಟಿವಿ ಚಾನೆಲ್ ಗಳು ತಾಮುಂದು ನಾಮುಂದು ಎಂಬಂತೆ ಒಬ್ಬರಿಗಿಂತ ಇನ್ನೊಬ್ಬರು (ಒಳ್ಳೇ ಜಿದ್ದಿಗೆ ಬಿದ್ದೋರ ತರ)ರೋಚಕ-ರಸಮಯ ಸುದ್ದಿಗಳನ್ನು ಬಿತ್ತರಿಸುತ್ತಲೇ ಇದ್ದರು. ಯಾವ ಪೇಪರ್ ಓಪನ್ ಮಾಡಿದ್ರೂ ಯಾವ ಚಾನೆಲ್ ಹಾಕಿ ಕೂತ್ರೂ ಸರ್ವಂ ಧೋನಿ ಮಯಂ ಎಂಬತಾಗಿತ್ತು ಸ್ಥಿತಿ. ನಿಜ. ಬೆಂಬಲ, ಪ್ರೋತ್ಸಾಹ, ವಿಜಯೋತ್ಸಾಹ ಎಲ್ಲವೂ ಇರಬೇಕು, ಆದರೆ ಲಿಮಿಟ್ ಇಲ್ಲದೇ ಈ ಪರಿಯ ಭಾರೀ ಪ್ರಚಾರಗಳ ಅಗತ್ಯತೆ ಖಂಡಿತಾ ಇರಲಿಲ್ಲ. ಸರಿ, ಎಲ್ಲಾ ಕ್ರೀಡೆಗೂ ಇದೇ ರೀತಿಯ ಪ್ರಚಾರಗಳು, ಪ್ರೋತ್ಸಾಹಗಳು ಸಿಗುತ್ತಿದ್ದರೆ ಆ ಮಾತೇ ಬೇರೆ ಬಿಡಿ. ಮಾಧ್ಯಮಗಳ ಈ ಮಲತಾಯಿ ಧೋರಣೆ ನನಗಂತೂ ಸರಿ ಅನಿಸುತ್ತಿಲ್ಲ...

Anonymous said...

ಅರ್ಚನಾ,
ತಡವಾಗಿ ಅಭಿನಂದಿಸುತ್ತಿದೇನೆ, ಬ್ಲಾಗ್ ಲೋಕಕ್ಕೆ ಸ್ವಾಗತ!!
ನಿಮ್ಮೀ ಬರಹ ಈಗಿನ ನ್ಯೂಸ್ ಚ್ಯಾನೆಲ್ ’ವಾರ್’ಗಳಿಗೆ ಹಿಡಿದ ಕನ್ನಡಿ. ಗುಂಡಿಯಲ್ಲಿ ಬಿದ್ದ ಹುಡುಗನಿಂದ ಹಿಡಿದು, ಡಯಾನಾಳ ಸಾಯುವ ದಿನದ ಫೂಟೇಜುಗಳವರೆಗೆ ಎಲ್ಲವನ್ನು ಆವರಿಸಿಕೊಂಡಿರುವ ಸುದ್ದಿಗಳ ಭರಾಟೆ ಅವರಿಗೇ ಅರಿವಾಗುವಂಥದು! ನನ್ನ ಬ್ಲಾಗ್ ರೋಲಿನಲ್ಲಿರುವ ’ಮಜಾವಾಣಿ’ಗೆ ಹೋಗಿನೋಡಿ. ವಿಭಿನ್ನವಾದುದೇನಾದರೂ ದಕ್ಕೀತು!

Anonymous said...

Blog is good
simple and straight

moreover thanks for adding one more paragraph for my poem in avdhi blog

i did notthink from thatangle
your thought makes the difference-like ur blog

regards
G N Mohan, Hyderabad

Archana said...

ಟೀನಾ ಅವರೇ ಧನ್ಯವಾದಗಳು.
ತಾವು ಹೇಳಿದಂತೆ'ಮಜಾವಾಣಿ'ಗೆ ಹೋಗಿ ಒಂದಷ್ಟು ಮಜಾ ಮಾಡಿ ಬಂದೆ. ನಿಮ್ಮ ಸ್ವಾಗತಕ್ಕೆ ಕೃತಜ್ಞತೆಗಳು. ಚ್ಯಾನೆಲ್ ವಾರ್ ಗಳು ಹೆಚ್ಚುತ್ತಿರುವುದಂತೂ ಸುಳ್ಳಲ್ಲ. ಎಲ್ಲಾ ಟಿಆರ್ ಪಿ ಮಹಿಮೆ.

ಜಿ.ಎನ್.ಮೋಹನ್ ಅವರೇ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.