Thursday, November 29, 2007

ನಂದಿಗ್ರಾಮ ನರಹತ್ಯೆ ಮುಖಪುಟ ಸುದ್ದಿ ಅಲ್ಲವೇ?

ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಕಣ್ಣಾಯಿಸದೆ. ಬರೀಬೇಕು ಬರೀಬೇಕು ಅಂದುಕೊಂಡು ದಿನಗಳೇ ಸರಿದುಹೋದರೂ ಬರೆಯಕ್ಕಾಗಿಲ್ಲ. ಏನೋ ಈ ಕೆಲಸದ ಒತ್ತಡ, ಒಂಚೂರು ಅನಾರೋಗ್ಯ, ಒಂದು ವಾರ ಬೆಡ್ ರೆಸ್ಟ್ ಹಿಂಗೆ ಏನೇನೋ ಕಾರಣಗಳು. ಪತ್ರಿಕೆ, ನಿಯತಕಾಲಿಕೆಗಳ ಕಡೆ ಸರಿಯಾಗಿ ಕಣ್ಣಾಯಿಸದೆ ತಿಂಗಳೇ ಸರಿದುಹೋಯ್ತು ಅನಿಸುತ್ತೆ.

ಮೊನ್ನೆ ಮೊನ್ನೆ ನಂದಿಗ್ರಾಮ ರಕ್ತಪಾತ ನಡೆಯಿತಲ್ಲ. ಆವಾಗ ಒಂದಿಷ್ಟು ಪತ್ರಿಕೆಗಳನ್ನು ಗಮನಿಸಿದೆ. ಆಗ ಕರ್ನಾಟಕದಲ್ಲಿ ರಾಜಕೀಯ ಮೇಳ ನಡೆಯುತ್ತಿತ್ತು. ನಂದಿಗ್ರಾಮದಲ್ಲಿ ಬಡಜನರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಾ ಇದ್ರು. ಇನ್ನೊಂದೆಡೆ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಓಂ ಶಾಂತಿ ಓಂ' ಬಿಡುಗಡೆಗೆ ಎಲ್ಲಡೆ ಸಿದ್ಧತೆ ನಡೆಯುತ್ತಿತ್ತು. ನಂದಿಗ್ರಾಮದಲ್ಲಿ ಜನರು ಸಾಯುತ್ತಿದ್ದರೂ, ನಮ್ಮ ಪತ್ರಿಕೆಗಳಿಗೆ ರಾಜಕೀಯ, 'ಓಂ ಶಾಂತಿ ಓಂ' ಬಿಟ್ಟರೆ ನಂದಿಗ್ರಾಮದ ಸುದ್ದಿ ಮಹತ್ವದ್ದು ಅನಿಸಿಲ್ಲ. ಅದೇ ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಯೂ ಬುಷ್ ಶ್ವೇತಭವನದಲ್ಲಿ ಮೈಕ್ ಎದುರು ಮಾತಾಡಿದ್ರೆ ನಮ್ಮವರಿಗೆ ಮುಖಪುಟದ ಸುದ್ದಿ ಆಗುತ್ತಿತ್ತು. ಬಚ್ಚನ್ ಕುಟುಂಬ ದೇವಸ್ಥಾನಕ್ಕೆ ಹೋದ್ರೆ ಅದು ದೊಡ್ಡ ಸುದ್ದಿ. ಬೇಕಾದ್ರೆ ಊಟ ತಿಂಡಿ ತಿನ್ನದೆ ಅವರನ್ನು ಮಾತಾಡಿಸಲು ನಮ್ಮ ಪತ್ರಕರ್ತರು ಕಾದುಕುಳಿತಿರುತ್ತಾರೆ. ಮೊನ್ನೆ ಅಭಿಷೇಕ್-ಐಶ್ವರ್ಯ ಮಂಗಳೂರಿಗೆ ಬಂದ್ರಲ್ಲಾ? ಐಶ್ವರ್ಯ ತಂದೆಯ ಹುಟ್ಟುಹಬ್ಬಕ್ಕೆ ಆ ಪೋಟೋಗಳು ಎಲ್ಲಾ ಪತ್ರಿಕೆಗಳಲ್ಲೂ ಬಂದಿವೆ. ಅದೇ 'ಟೈಮ್ಸ್ ಆಫ್ ಇಂಡಿಯಾ ' ಕನ್ನಡದಲ್ಲಿ ಸರಿಸುಮಾರು ಕಾಲು ಪೇಜ್ ಗಿಂತಲೂ ಹೆಚ್ಚು ಈ ಬಗ್ಗೆ ಬರೆದಿದ್ದರು. ಬರೆದಿದ್ದೇನು ಗೊತ್ತಾ? 'ಅಭಿಷೇಕ್-ಐಶ್ ಬಂದ್ರು..........ಎಷ್ಟೆ ಕಾದ್ರೂ ಪತ್ರಕರ್ತರಿಗೆ ಮಾತಾಡಲು ಸಿಗದೆ ಕಾರು ಹತ್ತಿ ಹೋದರು..." ಅಂತೂ-ಇಂತೂ ಕಾದ್ರೂ ಸಿಕ್ಕಿಲ್ಲ. ಅಂತೆ-ಕಂತೆಗಳ ಸುದ್ದಿಯನ್ನು ಅಷ್ಟುದ್ಧ ಹೇಳಬೇಕಿತ್ತೆ? ಇಲ್ಲ. ಮತ್ಯಾಕೆ ಹೇಳಿದ್ದು? ಅವ್ರ ಪೋಟೋ ನೋಡಿಯಾದ್ರೂ ಜನ ಓದಲಿ ಎಂದೇ? .

ಇದೇ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಮ್ಯಾಗಜಿನ್ ತೆಗೆದು ಓದಿದೆ. ಇಂಗ್ಲೀಷ್ 'ದ ಸಂಡೆ ಇಂಡಿಯನ್' ನೋಡಿದ್ರೆ ಮುಖಪುಟದಲ್ಲಿಯೇ ಶಾರುಖ್ ಖಾನ್ ಮತ್ತು ದೀಪಿಕಾ ಮುಂಚುತ್ತಿದ್ದಾರೆ. ನಂದಿಗ್ರಾಮದ ಸುದ್ದಿ ಒಳಪುಟದಲ್ಲಿದೆ. ಸರಿ..ಅದನ್ನೇ ಮುಖಪುಟ ಸುದ್ದಿಯಾಗಿ ಮಾಡಬಹುದಿತ್ತಲ್ಲಾ? ಅದೇ ಕನ್ನಡ 'ದ ಸಂಡೆ ಇಂಡಿಯನ್' ನಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಕುರಿತಾದಿ ಮುಖಪುಟ ಲೇಖನ. ಅದಾದ್ರೂ ಪ್ರಸ್ತುತ. ಯಾಕೆಂದ್ರೆ ಅದೇ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು. ಆದರೆ ಅದ್ಯಾಕೆ ಆ ಸಿನಿಮಾ ತಾರೆಯರ ಸುದ್ದಿಯೇ ಮುಖಪುಟ ಸುದ್ದಿಯಾಗುತ್ತೋ ದೇವರೇ ಬಲ್ಲ. ಒಟ್ಟಾಗಿ ಹೇಳುವುದಾದರೆ ಮುಖಪುಟದಲ್ಲಿ ಚಂದದ ಪೋಟೋ ಹಾಕಿ ಮಾರಾಟ ಹೆಚ್ಚಿಸುವ ಬ್ಯುಸಿನೆಸ್ ಮಾಡ್ತಾ ಇದ್ದಾವೆ ಈ ಪತ್ರಿಕೆಗಳು. ಪತ್ರಿಕೆಗಳು ಸಮಾಜದ ಮುಖವಾಣಿ ಅನ್ತಾರಲ್ಲಾ? ಈ ಬಗ್ಗೆಯೇ ಸಂಶಯ ಮೂಡುತ್ತೆ.

ಹಾಂ! ಒಂದು ವಿಷಯ ನೆನಪಾಯಿತು. ಕನ್ನಡ ಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ ನೀಡುತ್ತಲ್ಲಾ? ಈ ಬಗ್ಗೆ ನಿಮಗೆ ತಿಳಿದಿರಬಹುದು. ಪ್ರಶಸ್ತಿ ಪಡೆಯಬೇಕಾದ ಅರ್ಹತೆ ಏನಿರಬೇಕು ಎಂದು ತಿಳಿಸಿದ್ದಾರೆ. ಅದನ್ನು ಪ್ರತಿಯೊಬ್ಬರು ಓದಬೇಕು. ನಿಜವಾದ ಪತ್ರಿಕಾ ಧರ್ಮ ಅದು. ಹಾಗಂತ ಕನ್ನಡ ಪ್ರಭವನ್ನು ಹೊಗಳುತ್ತಿಲ್ಲ. ಪ್ರಶಸ್ತಿ ನೀಡಬೇಕಾದರೆ ಎಂಥವರಿಗೆ ಪ್ರಶಸ್ತಿ ನೀಡಬೇಕೆಂದು ತಿಳೀಸಿದ್ದರಲ್ಲಾ ಅದು ನಂಗೆ ತುಂಬಾ ಇಷ್ಟವಾಯಿತು.

ಓಹ್! ಇನ್ನೇನೇನೋ ಹೇಳಬೇಕಿತ್ತು. ಆದ್ರೆ ಈಗ ಸಮಯವಿಲ್ಲ. ಅದೇ ಹಳೇ ರಾಗ....ಮತ್ತೆ ಭೇಟಿಯಾಗೋಣ

Friday, November 2, 2007

ಇದು ಕನ್ನಡಿಗರ ಹೆಮ್ಮೆಯೇ?

'ಜಗತ್ತು ಬದಲಾಗಿದೆ, ನಾವ್ಯಾಕೆ ಬದಲಾಗಬಾರದು?...'ಕರ್ನಾಟಕ ರಾಜ್ಯೋತ್ಸವ ದಿನ ಬೆಳಿಗ್ಗೆ ಏಳು ಗಂಟೆಗೆ 'ಸಮಸ್ತ ಕನ್ನಡಿಗರ ಹೆಮ್ಮೆ'ಯಾಗಿ ಏಳು ವರ್ಷಗಳ ಹಿಂದೆ ಜನ್ಮತಾಳಿದ 'ವಿಜಯ ಕರ್ನಾಟಕ' ಪತ್ರಿಕೆ ಓದಲು ಕೈಗೆತ್ತಿಕೊಂಡಾಗ ಕಂಡ ಬರಹವಿದು. ಪ್ರಜಾವಾಣಿ, ಕನ್ನಡಪ್ರಭ ಮೂರು ಪತ್ರಿಕೆಗಳನ್ನೂ ಅವತ್ತು ಮನೆಗೆ ತರಿಸಿದ್ದೆ. ಮೊದಲು ವಿಜಯಕರ್ನಾಟಕವನ್ನೇ ಕೈಗೆತ್ತಿಕೊಂಡೆ. ಅದಕ್ಕೆ ಕಾರಣವೂ ಇತ್ತು. ಒಂದು ತಿಂಗಳ ಹಿಂದೆಯೇ ನನ್ನೊಬ್ಬ ಸ್ನೇಹಿತ ವಿಜಯಕರ್ನಾಟಕ 'ಹೊಸತಾ'ಗುತ್ತಿದೆ ಎಂದಿದ್ದ. ಕೆಲದಿನಗಳಿಂದ ವಿ.ಕ.ದಲ್ಲಿಯೂ ನಿತ್ಯ ನಾವು ಹೊಸತಾಗುತ್ತಿದ್ದೇವೆ..ಬದಲಾಗಲಿದ್ದೇವೆ..ಎಂದು ಜಾಹೀರಾತು ಬೇರೆ. ಅಂದಿನಿಂದ ನವೆಂಬರ್ 1 ರವರೆಗೆ ಕಾಯುವುದೇ ಆಯಿತು.

ಕಾಯುತ್ತಿದ್ದ ದಿನ ಬಂದೇ ಬಿಟ್ಟಿತ್ತು. 'ಜಗತ್ತು ಬದಲಾಗಿದೆ. ನಾವೂ ಬದಲಾಗುತ್ತಿದ್ದೇವೆ'- ಒಂದು ಪುಟದಲ್ಲಿ ಈ ಎರಡು ವಾಕ್ಯಗಳನ್ನು ದೊಡ್ಡಕ್ಷರದಲ್ಲಿ ಬರೆಯಲಾಗಿತ್ತು. ವಿ.ಕ. ವೆಂದು ಕೈಗೆತ್ತಿಕೊಂಡ ನಾನು 'ಟೈಪ್ಸ್ ಆಫ್ ಇಂಡಿಯಾ' ವನ್ನು ಓದುತ್ತಿದ್ದೇನೇನೋ ಎಂದೆನಿಸಿ ನಾಲ್ಕೈದು ಬಾರಿ ತಿರುವಿ ನೋಡಿದ್ದೆ.

ಕಳೆದ ಏಳು ವರ್ಷಗಳ ಹಿಂದೆ ವಿಜಯಕರ್ನಾಟಕ ಎಂಬ ಹೆಸರಿನ ಅಚ್ಚಕನ್ನಡದ ಪತ್ರಿಕೆಯೊಂದು ನಮ್ಮ ಕೈಗೆ ಸಿಕ್ಕಾಗ ಕನ್ನಡಿಗ ಹೆಮ್ಮೆ ಪಟ್ಟಿದ್ದ. ವಿ.ಕ ಕನ್ನಡ ಪತ್ರಿಕೆಗಳ ನಡುವೆ ನಂ.1 ಸ್ಥಾನ ಗಿಟ್ಟಿಸಿಯೂ ಆಯ್ತು. ಅದಾಗಲೇ 'ಟೈಮ್ಸ್ ಗ್ರೂಪ್' ಗೆ 180 ಕೋಟಿ ರೂಪಾಯಿಗೆ ಮಾರಿಯೂ ಆಯ್ತು. ನಾವು ಟೈಮ್ಸ್ ಗ್ರೂಪ್ ಗೆ ಮಾರಿಕೊಂಡಿದ್ದೇವೆ ಅದೂ ನಮ್ಮ ಹೆಮ್ಮೆ ಎಂದುಕೊಂಡಿತ್ತು ವಿಜಯಕರ್ನಾಟಕ.ಇಂದು ತನ್ನತನವನ್ನೇ ಮಾರಿಕೊಂಡು ಇದು ನಮ್ಮ ಬದಲಾವಣೆ..ಇದೂ ನಮ್ಮ ಹೆಮ್ಮೆ ಎಂದು ಬೀಗುತ್ತಿದೆ. ಟೈಮ್ಸ್ ಆಫ್ ಇಂಡಿಯಾದ ಮುಖವಾಣಿಯಂತೆ ಬಂದಿರುವ ಈ ವಿಜಯ ಕರ್ನಾಟಕ ಕನ್ನಡಿಗರ ಹೆಮ್ಮೆಯೇ? ಬದಲಾವಣೆ ಯಾವ ತರದ್ದು? ಒಂದು ತಿಂಗಳಿಂದ ಹೊಸತಾಗುತ್ತಿದ್ದೇವೆ..ನಮ್ಮದೆಲ್ಲವೂ ಹೊಸತು ಎಂದು ಜಾಹೀರಾತು ನೀಡಿ ಜನತೆಯನ್ನು ಮೂರ್ಖರನ್ನಾಗಿ ಮಾಡಿ ಇದೀಗ ಪತ್ರಿಕೆ ನೋಡಿಯೂ ಓದುಗ ಕುರುಡನಾಗುತ್ತಾನೆ ಎಂದುಕೊಂಡಿದೆ. ಬದಲಾವಣೆ ಅಂದಾಗ ನಮ್ಮ ಕನ್ನಡಿಗರ ಬಗ್ಗೆ ಪುಟಗಟ್ಟಲೇ ಅಭಿಮಾನದ ಮಾತುಗಳಾಡುವ ವಿಶ್ವೇಶ್ವರ ಭಟ್ಟರು ಏನಾದರೂ ನೂತನ ಬದಲಾವಣೆ ತರುತ್ತಾರೆ ಎಂದೇ ಜನ ನಂಬಿದ್ದರು. ಆದರೆ ಕರ್ನಾಟಕ ರಾಜ್ಯೋತ್ಸವ ದಂದು ವಿ.ಕ ಕೊಟ್ಟ ಕೊಡುಗೆಯೇನು ಎಂಬುವುದನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ಹೇಳಿದರೂ ಕಡಿಮೆಯೇ.

ನಿನ್ನೆ ನಮ್ಮ ಪಕ್ಕದ್ಮನೆ ಅಂಕಲ್ ಓದಿ 'ಇದೇನಮ್ಮಾ,. ವಿ.ಕ. ಟೈಮ್ಸ್ ಆಫ್ ಇಂಡಿಯಾ ಆಗಿದೆ..ವಿ.ಕ.ಕ್ಕೆ ಒಂದು ಲುಕ್ ಇತ್ತು. ಇನ್ನು ಅದೂ ಇಲ್ಲ. ಎಲ್ಲಿ ಏನು ಓದಬೇಕೋ ಗೊತ್ತಾಗುತ್ತಿಲ್ಲ..." ಎಂದು ಬೇಸರ ವ್ಯಕ್ತಪಡಿದ್ದರು. ಒಂದು ವೇಳೆ ವಿ.ಕ. ತನ್ನಲ್ಲಿಯೇ ಒಂದು ಹೊಸ ಬದಲಾವಣೆ ತರುತ್ತಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ 'ಟೈಮ್ಸ್ ಆಫ್ ಇಂಡಿಯಾ'ದ ರೂಪ ನೀಡಿ. 'ಜಗತ್ತಿನ ಬದಲಾವಣೆಗಾಗಿ ನಮ್ಮದೊಂದು ಅದ್ಭುತ ಬದಲಾವಣೆ' ಎಂದು ಹೇಳಿ ಓದುಗರನ್ನು ಮೂರ್ಖರನ್ನಾಗಿಸಲು ಹೊರಟಿದೆ. ಖಂಡಿತವಾಗಿಯೂ ವಿ.ಕ.ಕ್ಕೆ ಕೋಕ್ ಬೀಳುವ ದಿನ ದೂರವಿಲ್ಲ. ಟೈಮ್ ಗ್ರೂಪ್ಗೆ ಬೇಕಾಗಿರೋದು ಕರ್ನಾಟಕವಲ್ಲ, ಕನ್ನಡಿಗರಲ್ಲ.. ಬದಲಾಗಿ ಅವರ ಬ್ರಾಂಡ್..ಅದಕ್ಕಾಗಿಯೇ ನೋಡಿ ವಿ.ಕ ದ 'ಲಾಂಛನ'ವೂ ಬದಲಾಗಿದೆ. ಒಂದೆಡೆ ನಾವು ಕನ್ನಡಿಗರಿಗಾಗಿ, ನಾವು ಕನ್ನಡಿಗರ ಹೆಮ್ಮೆ ಎಂದು ಬೀಗುವ ಈವರೆಗೆ ಕನ್ನಡಿಗರ ಮೆಚ್ಚಿನ ಪತ್ರಿಕೆಯಾಗಿದ್ದ ವಿ.ಕ. ಏನು ಮಾಡುತ್ತಿದೆ? ಇದು ಕನ್ನಡದ ಹೆಮ್ಮೆಯಲ್ಲ, ಅವಮಾನ. ಯಾವಾಗ ವಿ.ಕ. ಒಡೆತನ ಟೈಮ್ಸ್ ಗ್ರೂಪ್ ಪಾಲಾಯಿತೋ ಉಷಾಕಿರಣ, ವಿಜಯ ಟೈಮ್ಸ್ ನಿಂತುಹೋಯಿತು. ಇದೀಗ ವಿ.ಕ. ಟೈಮ್ಸ್ ರೂಪು ನೀಡಿ ಜನರಿಗೆ ಇನ್ನೊಂದು 'ಟೈಮ್ಸ್ ಆಫ್ ಇಂಡಿಯಾ' ನೀಡುವ ಕೆಲ್ಸ. ಇದು ಜಗತ್ತಿನ ಬದಲಾವಣೆಗೆ ಅಲ್ಲ, ಕ್ರಿಯಾಶೀಲತೆ ಅಲ್ಲ, ವಿಕಾಸವಲ್ಲ..ಇದು ವಿ.ಕದ ಅಳಿವು..ಉಳಿವಲ್ಲ..ನಿರೀಕ್ಷೆಯಲ್ಲಿರಿ..ಕನ್ನಡಿಗರ ಹೆಮ್ಮೆಯಿಂದೇ ಬೀಗುವ ವಿಜಯ ಕರ್ನಾಟಕ ನಮ್ಮಿಂದ ದೂರವಾಗುವ ದಿನ ದೂರವಿಲ್ಲ..