Friday, December 7, 2007

ಅದ್ಭುತ ಸುದ್ದಿ!!

ಇವತ್ತು ಪ್ರಜಾವಾಣಿಯಲ್ಲಿ ಅದ್ಭುತ ಸುದ್ದಿ ಓದಿದೆ. ಏನೆಂದರೆ ' ಟೀಮ್ ಇಂಡಿಯಾಕ್ಕೆ ಅಡ್ಡ ಬಂದ ಕೊಂಬೆ'!! ವಿಷಯವೇನೆಂದರೆ ಇಂದು ಬೆಂಗಳೂರಿನಲ್ಲಿ ನಡೆಯುವ ಪಾಕಿಸ್ತಾನ-ಭಾರತ 3 ನೇ ಟೆಸ್ಟ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ತಂಡದ ಎಲ್ಲಾ ಆಟಗಾರರನ್ನು ಬನಶಂಕರಿಯಲ್ಲಿರುವ ತನ್ನ ಮನೆಗೆ ಆಹ್ವಾನಿಸಿದ್ದರು. ಹಾಗೆ ಬಸ್ಸಲ್ಲಿ ಹೋಗಿದ್ರಂತೆ. ಮಧ್ಯದಲ್ಲಿ ಯಾವುದೋ ಮರದ ಕೊಂಬೆಯೊಂದು ಅಡ್ಡ ಸಿಕ್ಕಿ, ಬಸ್ಸಿನ ಚಾಲಕ ಬಸ್ಸು ನಿಲ್ಲಿಸಿದ್ದ ಎಂದೂ ಪ್ರಕಟಿಸಿದ್ದರು. ನಂಗನಿಸೋದು 'ಮರದ ಕೊಂಬೆ ಅಡ್ಡಸಿಕ್ರೆ ಚಾಲಕ ಬಸ್ಸು ನಿಲ್ಲಿಸದೆ, ನಮಗೇನು ಬಸ್ಸು ನಿಲ್ಲಿಸೋಕೆ ಆಗುತ್ತಾ ಅಥವಾ ಕೊಂಬೆ ಸಿಕ್ರೆ ಬಸ್ಸು ಸರಾಗವಾಗಿ ಹೋಗಲು ಆಗುತ್ತಾ? ಇದೇನು ಮೂರ್ಖತನದ ಪ್ರಶ್ನೆ ಕೇಳ್ತೀನಿ ಅಂದುಕ್ಕೊಳ್ಳಬೇಡಿ. ನಿಜವಾಗ್ಲೂ ಇದೂ ಸುದ್ದಿಯೇ? ಟೀಮ್ ಇಂಡಿಯಾ ಅನ್ನೋ ಕಾರಣ ಪ್ರಕಟಿಸಿದ್ದಾರೆ ವಿನಹಃ ಬೇರೇ ಯಾವುದೇ ಉದ್ದೇಶದಿಂದ ಅಲ್ಲ ಬಿಡಿ. ಹೌದು! ಗುರು ಸಿನಿಮಾದ ಶೂಟಿಂಗ್ ಸಮಯದಲ್ಲಿ ಐಶ್ವರ್ಯ ಸೈಕಲ್ಲಿಂದ ಬಿದ್ದಿದ್ದನ್ನು ಎಲ್ಲಾ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟ ಮಾಡಿದ್ದವು. ಅವಳು ಬಿದ್ದಿದ್ದು, ಎದ್ದಿದ್ದು, ಅಭಿಷೇಕ್ ಕೈಹಿಡಿದು ನಿಲ್ಲಿಸಿದ್ದು, ಟ್ರೀಟ್ಮೆಂಟ್ ಮಾಡಿದ್ದು ಎಲ್ಲವನ್ನೂ ಪ್ರಕಟಿಸಿದ್ರು. ಇಂದು ನಮ್ಮ ಪತ್ರಿಕೆಗಳು ರಾಜಕೀಯ ಅಥವ ಕೊಂಬೆ ಅಡ್ಡ ಸಿಕ್ಕಂತಹ ಸಿಲ್ಲಿ ವಿಷಯಗಳನ್ನು ಪ್ರಕಟ ಮಾಡ್ತವೆ. ಆದ್ರೆ ಈ ಹಿಂದೆ ನಾನು ಹೇಳಿದಂತೆ 'ನಂದಿಗ್ರಾಮ'ದಂತಹ ಘೋರ ದುರಂತಗಳು ಸುದ್ದಿಯಾವುದಿಲ್ಲ ಬಿಡಿ.

Thursday, November 29, 2007

ನಂದಿಗ್ರಾಮ ನರಹತ್ಯೆ ಮುಖಪುಟ ಸುದ್ದಿ ಅಲ್ಲವೇ?

ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಕಣ್ಣಾಯಿಸದೆ. ಬರೀಬೇಕು ಬರೀಬೇಕು ಅಂದುಕೊಂಡು ದಿನಗಳೇ ಸರಿದುಹೋದರೂ ಬರೆಯಕ್ಕಾಗಿಲ್ಲ. ಏನೋ ಈ ಕೆಲಸದ ಒತ್ತಡ, ಒಂಚೂರು ಅನಾರೋಗ್ಯ, ಒಂದು ವಾರ ಬೆಡ್ ರೆಸ್ಟ್ ಹಿಂಗೆ ಏನೇನೋ ಕಾರಣಗಳು. ಪತ್ರಿಕೆ, ನಿಯತಕಾಲಿಕೆಗಳ ಕಡೆ ಸರಿಯಾಗಿ ಕಣ್ಣಾಯಿಸದೆ ತಿಂಗಳೇ ಸರಿದುಹೋಯ್ತು ಅನಿಸುತ್ತೆ.

ಮೊನ್ನೆ ಮೊನ್ನೆ ನಂದಿಗ್ರಾಮ ರಕ್ತಪಾತ ನಡೆಯಿತಲ್ಲ. ಆವಾಗ ಒಂದಿಷ್ಟು ಪತ್ರಿಕೆಗಳನ್ನು ಗಮನಿಸಿದೆ. ಆಗ ಕರ್ನಾಟಕದಲ್ಲಿ ರಾಜಕೀಯ ಮೇಳ ನಡೆಯುತ್ತಿತ್ತು. ನಂದಿಗ್ರಾಮದಲ್ಲಿ ಬಡಜನರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಾ ಇದ್ರು. ಇನ್ನೊಂದೆಡೆ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಓಂ ಶಾಂತಿ ಓಂ' ಬಿಡುಗಡೆಗೆ ಎಲ್ಲಡೆ ಸಿದ್ಧತೆ ನಡೆಯುತ್ತಿತ್ತು. ನಂದಿಗ್ರಾಮದಲ್ಲಿ ಜನರು ಸಾಯುತ್ತಿದ್ದರೂ, ನಮ್ಮ ಪತ್ರಿಕೆಗಳಿಗೆ ರಾಜಕೀಯ, 'ಓಂ ಶಾಂತಿ ಓಂ' ಬಿಟ್ಟರೆ ನಂದಿಗ್ರಾಮದ ಸುದ್ದಿ ಮಹತ್ವದ್ದು ಅನಿಸಿಲ್ಲ. ಅದೇ ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಯೂ ಬುಷ್ ಶ್ವೇತಭವನದಲ್ಲಿ ಮೈಕ್ ಎದುರು ಮಾತಾಡಿದ್ರೆ ನಮ್ಮವರಿಗೆ ಮುಖಪುಟದ ಸುದ್ದಿ ಆಗುತ್ತಿತ್ತು. ಬಚ್ಚನ್ ಕುಟುಂಬ ದೇವಸ್ಥಾನಕ್ಕೆ ಹೋದ್ರೆ ಅದು ದೊಡ್ಡ ಸುದ್ದಿ. ಬೇಕಾದ್ರೆ ಊಟ ತಿಂಡಿ ತಿನ್ನದೆ ಅವರನ್ನು ಮಾತಾಡಿಸಲು ನಮ್ಮ ಪತ್ರಕರ್ತರು ಕಾದುಕುಳಿತಿರುತ್ತಾರೆ. ಮೊನ್ನೆ ಅಭಿಷೇಕ್-ಐಶ್ವರ್ಯ ಮಂಗಳೂರಿಗೆ ಬಂದ್ರಲ್ಲಾ? ಐಶ್ವರ್ಯ ತಂದೆಯ ಹುಟ್ಟುಹಬ್ಬಕ್ಕೆ ಆ ಪೋಟೋಗಳು ಎಲ್ಲಾ ಪತ್ರಿಕೆಗಳಲ್ಲೂ ಬಂದಿವೆ. ಅದೇ 'ಟೈಮ್ಸ್ ಆಫ್ ಇಂಡಿಯಾ ' ಕನ್ನಡದಲ್ಲಿ ಸರಿಸುಮಾರು ಕಾಲು ಪೇಜ್ ಗಿಂತಲೂ ಹೆಚ್ಚು ಈ ಬಗ್ಗೆ ಬರೆದಿದ್ದರು. ಬರೆದಿದ್ದೇನು ಗೊತ್ತಾ? 'ಅಭಿಷೇಕ್-ಐಶ್ ಬಂದ್ರು..........ಎಷ್ಟೆ ಕಾದ್ರೂ ಪತ್ರಕರ್ತರಿಗೆ ಮಾತಾಡಲು ಸಿಗದೆ ಕಾರು ಹತ್ತಿ ಹೋದರು..." ಅಂತೂ-ಇಂತೂ ಕಾದ್ರೂ ಸಿಕ್ಕಿಲ್ಲ. ಅಂತೆ-ಕಂತೆಗಳ ಸುದ್ದಿಯನ್ನು ಅಷ್ಟುದ್ಧ ಹೇಳಬೇಕಿತ್ತೆ? ಇಲ್ಲ. ಮತ್ಯಾಕೆ ಹೇಳಿದ್ದು? ಅವ್ರ ಪೋಟೋ ನೋಡಿಯಾದ್ರೂ ಜನ ಓದಲಿ ಎಂದೇ? .

ಇದೇ ಸಂದರ್ಭದಲ್ಲಿ 'ದ ಸಂಡೆ ಇಂಡಿಯನ್' ಮ್ಯಾಗಜಿನ್ ತೆಗೆದು ಓದಿದೆ. ಇಂಗ್ಲೀಷ್ 'ದ ಸಂಡೆ ಇಂಡಿಯನ್' ನೋಡಿದ್ರೆ ಮುಖಪುಟದಲ್ಲಿಯೇ ಶಾರುಖ್ ಖಾನ್ ಮತ್ತು ದೀಪಿಕಾ ಮುಂಚುತ್ತಿದ್ದಾರೆ. ನಂದಿಗ್ರಾಮದ ಸುದ್ದಿ ಒಳಪುಟದಲ್ಲಿದೆ. ಸರಿ..ಅದನ್ನೇ ಮುಖಪುಟ ಸುದ್ದಿಯಾಗಿ ಮಾಡಬಹುದಿತ್ತಲ್ಲಾ? ಅದೇ ಕನ್ನಡ 'ದ ಸಂಡೆ ಇಂಡಿಯನ್' ನಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಕುರಿತಾದಿ ಮುಖಪುಟ ಲೇಖನ. ಅದಾದ್ರೂ ಪ್ರಸ್ತುತ. ಯಾಕೆಂದ್ರೆ ಅದೇ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು. ಆದರೆ ಅದ್ಯಾಕೆ ಆ ಸಿನಿಮಾ ತಾರೆಯರ ಸುದ್ದಿಯೇ ಮುಖಪುಟ ಸುದ್ದಿಯಾಗುತ್ತೋ ದೇವರೇ ಬಲ್ಲ. ಒಟ್ಟಾಗಿ ಹೇಳುವುದಾದರೆ ಮುಖಪುಟದಲ್ಲಿ ಚಂದದ ಪೋಟೋ ಹಾಕಿ ಮಾರಾಟ ಹೆಚ್ಚಿಸುವ ಬ್ಯುಸಿನೆಸ್ ಮಾಡ್ತಾ ಇದ್ದಾವೆ ಈ ಪತ್ರಿಕೆಗಳು. ಪತ್ರಿಕೆಗಳು ಸಮಾಜದ ಮುಖವಾಣಿ ಅನ್ತಾರಲ್ಲಾ? ಈ ಬಗ್ಗೆಯೇ ಸಂಶಯ ಮೂಡುತ್ತೆ.

ಹಾಂ! ಒಂದು ವಿಷಯ ನೆನಪಾಯಿತು. ಕನ್ನಡ ಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ ನೀಡುತ್ತಲ್ಲಾ? ಈ ಬಗ್ಗೆ ನಿಮಗೆ ತಿಳಿದಿರಬಹುದು. ಪ್ರಶಸ್ತಿ ಪಡೆಯಬೇಕಾದ ಅರ್ಹತೆ ಏನಿರಬೇಕು ಎಂದು ತಿಳಿಸಿದ್ದಾರೆ. ಅದನ್ನು ಪ್ರತಿಯೊಬ್ಬರು ಓದಬೇಕು. ನಿಜವಾದ ಪತ್ರಿಕಾ ಧರ್ಮ ಅದು. ಹಾಗಂತ ಕನ್ನಡ ಪ್ರಭವನ್ನು ಹೊಗಳುತ್ತಿಲ್ಲ. ಪ್ರಶಸ್ತಿ ನೀಡಬೇಕಾದರೆ ಎಂಥವರಿಗೆ ಪ್ರಶಸ್ತಿ ನೀಡಬೇಕೆಂದು ತಿಳೀಸಿದ್ದರಲ್ಲಾ ಅದು ನಂಗೆ ತುಂಬಾ ಇಷ್ಟವಾಯಿತು.

ಓಹ್! ಇನ್ನೇನೇನೋ ಹೇಳಬೇಕಿತ್ತು. ಆದ್ರೆ ಈಗ ಸಮಯವಿಲ್ಲ. ಅದೇ ಹಳೇ ರಾಗ....ಮತ್ತೆ ಭೇಟಿಯಾಗೋಣ

Friday, November 2, 2007

ಇದು ಕನ್ನಡಿಗರ ಹೆಮ್ಮೆಯೇ?

'ಜಗತ್ತು ಬದಲಾಗಿದೆ, ನಾವ್ಯಾಕೆ ಬದಲಾಗಬಾರದು?...'ಕರ್ನಾಟಕ ರಾಜ್ಯೋತ್ಸವ ದಿನ ಬೆಳಿಗ್ಗೆ ಏಳು ಗಂಟೆಗೆ 'ಸಮಸ್ತ ಕನ್ನಡಿಗರ ಹೆಮ್ಮೆ'ಯಾಗಿ ಏಳು ವರ್ಷಗಳ ಹಿಂದೆ ಜನ್ಮತಾಳಿದ 'ವಿಜಯ ಕರ್ನಾಟಕ' ಪತ್ರಿಕೆ ಓದಲು ಕೈಗೆತ್ತಿಕೊಂಡಾಗ ಕಂಡ ಬರಹವಿದು. ಪ್ರಜಾವಾಣಿ, ಕನ್ನಡಪ್ರಭ ಮೂರು ಪತ್ರಿಕೆಗಳನ್ನೂ ಅವತ್ತು ಮನೆಗೆ ತರಿಸಿದ್ದೆ. ಮೊದಲು ವಿಜಯಕರ್ನಾಟಕವನ್ನೇ ಕೈಗೆತ್ತಿಕೊಂಡೆ. ಅದಕ್ಕೆ ಕಾರಣವೂ ಇತ್ತು. ಒಂದು ತಿಂಗಳ ಹಿಂದೆಯೇ ನನ್ನೊಬ್ಬ ಸ್ನೇಹಿತ ವಿಜಯಕರ್ನಾಟಕ 'ಹೊಸತಾ'ಗುತ್ತಿದೆ ಎಂದಿದ್ದ. ಕೆಲದಿನಗಳಿಂದ ವಿ.ಕ.ದಲ್ಲಿಯೂ ನಿತ್ಯ ನಾವು ಹೊಸತಾಗುತ್ತಿದ್ದೇವೆ..ಬದಲಾಗಲಿದ್ದೇವೆ..ಎಂದು ಜಾಹೀರಾತು ಬೇರೆ. ಅಂದಿನಿಂದ ನವೆಂಬರ್ 1 ರವರೆಗೆ ಕಾಯುವುದೇ ಆಯಿತು.

ಕಾಯುತ್ತಿದ್ದ ದಿನ ಬಂದೇ ಬಿಟ್ಟಿತ್ತು. 'ಜಗತ್ತು ಬದಲಾಗಿದೆ. ನಾವೂ ಬದಲಾಗುತ್ತಿದ್ದೇವೆ'- ಒಂದು ಪುಟದಲ್ಲಿ ಈ ಎರಡು ವಾಕ್ಯಗಳನ್ನು ದೊಡ್ಡಕ್ಷರದಲ್ಲಿ ಬರೆಯಲಾಗಿತ್ತು. ವಿ.ಕ. ವೆಂದು ಕೈಗೆತ್ತಿಕೊಂಡ ನಾನು 'ಟೈಪ್ಸ್ ಆಫ್ ಇಂಡಿಯಾ' ವನ್ನು ಓದುತ್ತಿದ್ದೇನೇನೋ ಎಂದೆನಿಸಿ ನಾಲ್ಕೈದು ಬಾರಿ ತಿರುವಿ ನೋಡಿದ್ದೆ.

ಕಳೆದ ಏಳು ವರ್ಷಗಳ ಹಿಂದೆ ವಿಜಯಕರ್ನಾಟಕ ಎಂಬ ಹೆಸರಿನ ಅಚ್ಚಕನ್ನಡದ ಪತ್ರಿಕೆಯೊಂದು ನಮ್ಮ ಕೈಗೆ ಸಿಕ್ಕಾಗ ಕನ್ನಡಿಗ ಹೆಮ್ಮೆ ಪಟ್ಟಿದ್ದ. ವಿ.ಕ ಕನ್ನಡ ಪತ್ರಿಕೆಗಳ ನಡುವೆ ನಂ.1 ಸ್ಥಾನ ಗಿಟ್ಟಿಸಿಯೂ ಆಯ್ತು. ಅದಾಗಲೇ 'ಟೈಮ್ಸ್ ಗ್ರೂಪ್' ಗೆ 180 ಕೋಟಿ ರೂಪಾಯಿಗೆ ಮಾರಿಯೂ ಆಯ್ತು. ನಾವು ಟೈಮ್ಸ್ ಗ್ರೂಪ್ ಗೆ ಮಾರಿಕೊಂಡಿದ್ದೇವೆ ಅದೂ ನಮ್ಮ ಹೆಮ್ಮೆ ಎಂದುಕೊಂಡಿತ್ತು ವಿಜಯಕರ್ನಾಟಕ.ಇಂದು ತನ್ನತನವನ್ನೇ ಮಾರಿಕೊಂಡು ಇದು ನಮ್ಮ ಬದಲಾವಣೆ..ಇದೂ ನಮ್ಮ ಹೆಮ್ಮೆ ಎಂದು ಬೀಗುತ್ತಿದೆ. ಟೈಮ್ಸ್ ಆಫ್ ಇಂಡಿಯಾದ ಮುಖವಾಣಿಯಂತೆ ಬಂದಿರುವ ಈ ವಿಜಯ ಕರ್ನಾಟಕ ಕನ್ನಡಿಗರ ಹೆಮ್ಮೆಯೇ? ಬದಲಾವಣೆ ಯಾವ ತರದ್ದು? ಒಂದು ತಿಂಗಳಿಂದ ಹೊಸತಾಗುತ್ತಿದ್ದೇವೆ..ನಮ್ಮದೆಲ್ಲವೂ ಹೊಸತು ಎಂದು ಜಾಹೀರಾತು ನೀಡಿ ಜನತೆಯನ್ನು ಮೂರ್ಖರನ್ನಾಗಿ ಮಾಡಿ ಇದೀಗ ಪತ್ರಿಕೆ ನೋಡಿಯೂ ಓದುಗ ಕುರುಡನಾಗುತ್ತಾನೆ ಎಂದುಕೊಂಡಿದೆ. ಬದಲಾವಣೆ ಅಂದಾಗ ನಮ್ಮ ಕನ್ನಡಿಗರ ಬಗ್ಗೆ ಪುಟಗಟ್ಟಲೇ ಅಭಿಮಾನದ ಮಾತುಗಳಾಡುವ ವಿಶ್ವೇಶ್ವರ ಭಟ್ಟರು ಏನಾದರೂ ನೂತನ ಬದಲಾವಣೆ ತರುತ್ತಾರೆ ಎಂದೇ ಜನ ನಂಬಿದ್ದರು. ಆದರೆ ಕರ್ನಾಟಕ ರಾಜ್ಯೋತ್ಸವ ದಂದು ವಿ.ಕ ಕೊಟ್ಟ ಕೊಡುಗೆಯೇನು ಎಂಬುವುದನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ಹೇಳಿದರೂ ಕಡಿಮೆಯೇ.

ನಿನ್ನೆ ನಮ್ಮ ಪಕ್ಕದ್ಮನೆ ಅಂಕಲ್ ಓದಿ 'ಇದೇನಮ್ಮಾ,. ವಿ.ಕ. ಟೈಮ್ಸ್ ಆಫ್ ಇಂಡಿಯಾ ಆಗಿದೆ..ವಿ.ಕ.ಕ್ಕೆ ಒಂದು ಲುಕ್ ಇತ್ತು. ಇನ್ನು ಅದೂ ಇಲ್ಲ. ಎಲ್ಲಿ ಏನು ಓದಬೇಕೋ ಗೊತ್ತಾಗುತ್ತಿಲ್ಲ..." ಎಂದು ಬೇಸರ ವ್ಯಕ್ತಪಡಿದ್ದರು. ಒಂದು ವೇಳೆ ವಿ.ಕ. ತನ್ನಲ್ಲಿಯೇ ಒಂದು ಹೊಸ ಬದಲಾವಣೆ ತರುತ್ತಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ 'ಟೈಮ್ಸ್ ಆಫ್ ಇಂಡಿಯಾ'ದ ರೂಪ ನೀಡಿ. 'ಜಗತ್ತಿನ ಬದಲಾವಣೆಗಾಗಿ ನಮ್ಮದೊಂದು ಅದ್ಭುತ ಬದಲಾವಣೆ' ಎಂದು ಹೇಳಿ ಓದುಗರನ್ನು ಮೂರ್ಖರನ್ನಾಗಿಸಲು ಹೊರಟಿದೆ. ಖಂಡಿತವಾಗಿಯೂ ವಿ.ಕ.ಕ್ಕೆ ಕೋಕ್ ಬೀಳುವ ದಿನ ದೂರವಿಲ್ಲ. ಟೈಮ್ ಗ್ರೂಪ್ಗೆ ಬೇಕಾಗಿರೋದು ಕರ್ನಾಟಕವಲ್ಲ, ಕನ್ನಡಿಗರಲ್ಲ.. ಬದಲಾಗಿ ಅವರ ಬ್ರಾಂಡ್..ಅದಕ್ಕಾಗಿಯೇ ನೋಡಿ ವಿ.ಕ ದ 'ಲಾಂಛನ'ವೂ ಬದಲಾಗಿದೆ. ಒಂದೆಡೆ ನಾವು ಕನ್ನಡಿಗರಿಗಾಗಿ, ನಾವು ಕನ್ನಡಿಗರ ಹೆಮ್ಮೆ ಎಂದು ಬೀಗುವ ಈವರೆಗೆ ಕನ್ನಡಿಗರ ಮೆಚ್ಚಿನ ಪತ್ರಿಕೆಯಾಗಿದ್ದ ವಿ.ಕ. ಏನು ಮಾಡುತ್ತಿದೆ? ಇದು ಕನ್ನಡದ ಹೆಮ್ಮೆಯಲ್ಲ, ಅವಮಾನ. ಯಾವಾಗ ವಿ.ಕ. ಒಡೆತನ ಟೈಮ್ಸ್ ಗ್ರೂಪ್ ಪಾಲಾಯಿತೋ ಉಷಾಕಿರಣ, ವಿಜಯ ಟೈಮ್ಸ್ ನಿಂತುಹೋಯಿತು. ಇದೀಗ ವಿ.ಕ. ಟೈಮ್ಸ್ ರೂಪು ನೀಡಿ ಜನರಿಗೆ ಇನ್ನೊಂದು 'ಟೈಮ್ಸ್ ಆಫ್ ಇಂಡಿಯಾ' ನೀಡುವ ಕೆಲ್ಸ. ಇದು ಜಗತ್ತಿನ ಬದಲಾವಣೆಗೆ ಅಲ್ಲ, ಕ್ರಿಯಾಶೀಲತೆ ಅಲ್ಲ, ವಿಕಾಸವಲ್ಲ..ಇದು ವಿ.ಕದ ಅಳಿವು..ಉಳಿವಲ್ಲ..ನಿರೀಕ್ಷೆಯಲ್ಲಿರಿ..ಕನ್ನಡಿಗರ ಹೆಮ್ಮೆಯಿಂದೇ ಬೀಗುವ ವಿಜಯ ಕರ್ನಾಟಕ ನಮ್ಮಿಂದ ದೂರವಾಗುವ ದಿನ ದೂರವಿಲ್ಲ..

Tuesday, October 30, 2007

ಯಾರು ಸಾಧಕರು..?

ಮೊನ್ನೆ ಮೊನ್ನೆ ಸುವರ್ಣ ರಾಜ್ಯೋತ್ಸವ ಆಚರಿಸಿ ಖುಷಿಪಟ್ಟಾಯಿತ್ತು. ಈಗ ಮತ್ತೆ ಬಂದಿದೆ 'ರಾಜ್ಯೋತ್ಸವ'..ಕನ್ನಡ ನಾಡಿನ ಹಬ್ಬ..ಕನ್ನಡಿಗರಾದ ನಮಗೆಲ್ಲಾ ಮನದೊಳಗೆ ಪುಳಕ.. ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿಗಳಿಗೇನು ಬರವಿಲ್ಲ. ಅರ್ಧಶತಕ್ಕಿಂತಲೂ ಹೆಚ್ಚು ಮಂದಿ ಸಾಧಕರು ರಾಜ್ಯೋತ್ಸವ ಪ್ರಶಸ್ತಿ ಪಡೆಯಲಿದ್ದಾರೆ. ಪ್ರತಿ ಬಾರಿಯೂ ಅಷ್ಟೇ ನಮ್ಮ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿ ದೊಡ್ಡದೇ ಇರುತ್ತದೆ. ಮಾತ್ರವಲ್ಲ ನಮ್ಮ ಕರ್ನಾಟಕ ಈ ವಿಷಯದಲ್ಲಿ ಎಂದಿಗೂ ಜಿಪುಣತನ ತೋರಿಸಿಲ್ಲ. ಸಿಕ್ಕಸಿಕ್ಕವರಿಗೆಲ್ಲಾ ಪ್ರಶಸ್ತಿ ನೀಡಿ ಶಹಭಾಸ್ ಗಿರಿ ಗಿಟ್ಟಿಸಿದೆ. ಹಾಗಂತ ಇವರೆಲ್ಲಾ ಪ್ರಶಸ್ತಿಗೆ ಅರ್ಹರಲ್ಲವೆಂದಲ್ಲ. ಆದರೆ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಸರ್ಕಾರ ಧುತ್ತನೆ ಎಚ್ಚೆತ್ತುಕೊಂಡು ಆತುರಾತುರದಿಂದ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿ ಬಿಡುತ್ತದೆ. ಆಗಲೇ ಗೊತ್ತು ಜನರಿಗೆ..ಓಹ್ ಇಷ್ಟು ಜನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು! ಆ ಸಾಧಕರ ಸಾಧನೆಯನ್ನು ಜನ ಹುಡುಕಾಡುವುದೂ ಆವಾಗಲೇ.. ಎಷ್ಟೋ ಬಾರಿ ಸರ್ಕಾರ ಮಹತ್ತರ ಸಾಧನೆ ಮಾಡಿದವರನ್ನೇ ಕಡೆಗಣಿಸಿದೆ, ಸರ್ಕಾರದ ಕ್ರಮ ಸರಿಯಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಮಾತ್ರವಲ್ಲ ಪ್ರಶಸ್ತಿಯ ಆಸೆಯಿಂದ ತಮ್ಮ ಹೆಸರು ನೋಂದಾಯಿಸಿ ಕೊನೆಗೆ ಪ್ರಶಸ್ತಿ ಸಿಗದೆ ಹತಾಶರಾಗಿ ಬೀದಿಗಿಳಿದ ಸನ್ನಿವೇಶಗಳು ಅದೆಷ್ಟೋ ಇವೆ.

ಹೀಗಿರುವಾಗ ಸರ್ಕಾರ ಸಾಧಕರನ್ನು ಗುರುತಿಸುವ ಕೆಲಸವನ್ನು ಜನಸಾಮಾನ್ಯರಿಗೆ ನೀಡಬೇಕು. ಮಹತ್ತರ ಸಾಧನೆ ಮಾಡಿದ ಎಂಥಹ ಮಹಾ ಸಾಧಕನಾದರೂ ಹಳ್ಳಿಯ ಸಾಮಾನ್ಯನಿಗೂ ಗೊತ್ತಿರುತ್ತದೆ. ಸರ್ಕಾರ ಈ ಕೆಲಸವನ್ನು ಜನರ ಕೈಗೆ ನೀಡಲಿ. ನಿಜವಾದ ಸಾಧಕನನ್ನು ಜನರು 'ಆಯ್ಕೆ' ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸರ್ಕಾರ ಈವರೆಗೆ ಆ ಬಗ್ಗೆ ಕಿಂಚಿತ್ತು ಯೋಚನೆಯೂ ಮಾಡಿಲ್ಲ. ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿ ಕೈತೊಳೆದುಕೊಂಡು ಸುಮ್ಮಿನಿರುತ್ತದೆ. ಪ್ರಶಸ್ತಿ ಪಡೆದವರು ಸಾಧಕರೋ ಅಥವ ಬಾಧಕರೋ ಪ್ರಶಸ್ತಿ ಕೊಟ್ಟರೆ ಸಾಕು..ಇದು ಸರ್ಕಾರದ ರೀತಿ.

ಪ್ರಶಸ್ತಿ-ಪುರಸ್ಕಾರ ಯಾವುದನ್ನೂ ಬಯಸದೆ ಸದ್ದಿಲ್ಲದ ಸಾಧಕರಾಗಿ ಮೆರೆದ ಅದೆಷ್ಟೋ ಮಹಾನುಭಾವರು ನಮ್ಮ ಸಮಾಜದಲ್ಲಿದ್ದಾರೆ. ಅವರೆಂದೂ ಪ್ರಚಾರ ಬಯಸುವುದಿಲ್ಲ. ಪ್ರಶಸ್ತಿಗಾಗಿ ತನ್ನ ಜೀವಮಾನದ 'ಸಾಧನೆ'ಗಳ ಪಟ್ಟಿಯನ್ನು ಸರ್ಕಾರದ ಮುಂದಿಟ್ಟು ಪ್ರಶಸ್ತಿ ನೀಡಿ ಎಂದು ಗೋಗರೆಯುವುದಿಲ್ಲ. ಸರ್ಕಾರ ಅವರಿಗೆ ಯಾವುದೇ ಮನ್ನಣೆ ನೀಡದಿದ್ದರೂ ಅವರೆಂದೂ ಬೀದಿಗಿಳಿದು ಪ್ರತಿಭಟನೆ ಮಾಡಿಲ್ಲ. ಆದರೆ ನಮ್ಮ ಸರ್ಕಾರ ಅಂಥವರನ್ನು ಹುಡುಕುವ ಪ್ರಯತ್ನ ಮಾಡಲ್ಲ. ಯಾಕೆಂದರೆ ಕುರ್ಚಿಗಾಗಿ ಕಿತ್ತಾಡುವ, ಅಧಿಕಾರ ಸಿಗಲೆಂದು ದೇಶದ ದೇವಸ್ಥಾನಗಳೆದುರು ಅಮಾಯಕರಂತೆ ಕೈಮುಗಿದು ದಿನವಿಡೀ ಪ್ರಾರ್ಥಿಸುವ, ಓಟಿಗಾಗಿ ಕೋಟಿಗಟ್ಟಲೆ 'ನೋಟು' ಖರ್ಚುಮಾಡಿ ವರ್ಷವಿಡೀ 'ಜಾಗೃತಿ' ಯಾತ್ರೆ ಕೈಗೊಳ್ಳುವ ನಮ್ಮನ್ನಾಳುವ 'ನಾಯಕರಿಗೆ' ಸಮಾಜದತ್ತ ಕಣ್ಣುಹಾಯಿಸಲು ಸಮಯವೆಲ್ಲಿದೆ ಹೇಳಿ?

ದಿನನಿತ್ಯ ಮಾಧ್ಯಮಗಳು ಈ ರೀತಿಯ ಲೇಖನಗಳನ್ನು ಪುಟಗಟ್ಟಲೇ ಬರೆಯುತ್ತಲೇ ಇರುತ್ತವೆ. 'ರಾಜಕೀಯ' ಕೊಳೆತು ನಾರಿದರೂ, ನಮ್ಮ ನಾಯಕ ಮಹಾಶಯರು ಬದಲಾಗಿಲ್ಲ ಅದು ಬೇರೆ ವಿಷಯ. ಆದ್ರೂ ಒಬ್ಬೇ ಒಬ್ಬ ನಾಯಕನಾದ್ರೂ ಸಮಾಜದತ್ತ ಕಣ್ಣೆತ್ತಿ ನೋಡಬಹುದೆಂಬ ಭರವಸೆಯಿಂದ ನಾವು ಬರೆಯುತ್ತಿದ್ದೇವೆ.

ಇರಲಿ..
ಕನ್ನಡಿಗರಾದ ಎಲ್ಲರಿಗೂ 'ನಾಡ ಹಬ್ಬ'ದ ಶುಭಾಶಯಗಳು
ಇದು ಕೇವಲ ಹಬ್ಬವಲ್ಲ..ನಮ್ಮನ್ನು ನಾವು ಅತ್ಮಾವಲೋಕನ ಮಾಡಿಕೊಳ್ಳುವ ಸಮಯ. ಕನ್ನಡಿಗರಾದ ನಾವು ಕನ್ನಡಕ್ಕೇನು ನೀಡಿದ್ದೇವೆ? ತಮ್ಮಿಂದ ಏನು ಕೊಡಲು ಸಾಧ್ಯ? ಕನ್ನಡ ಭಾಷೆ ಕೇವಲ ಭಾಷೆಯಲ್ಲ..ಕನ್ನಡ ನಮ್ಮಮ್ಮ..ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಬೇಕು..ಕನ್ನಡ ದೀಪ ಹಚ್ಚಬೇಕು..ಅದು ನಮ್ಮ ಮನೆ-ಮನಗಳನ್ನು ಬೆಳಗಬೇಕು.
'ಎಲ್ಲಾದರೂ ಇರು, ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು.."
*** *** *** ***

Wednesday, October 10, 2007

'ಗಾಂಧಿ' ನಡುವೆ ಮರೆಯಾದ 'ಶಾಸ್ತ್ರೀಜಿ'


ಅದೇ ಮೊನ್ನೆ ಮೊನ್ನೆ ವಿಶ್ವಕಪ್ ಟ್ವೆಂಟಿ-20 ಸಂಭ್ರಮವನ್ನು ಪುಟಗಟ್ಟಲೆ ಗೀಚಿ, 'ಶಕ್ತಿ-ಭಕ್ತಿ'ಎಂದೆಲ್ಲಾ ಪೂಜಿಸಿದ ನಮ್ಮ ಈ ವಾರದ ವಾರಪತ್ರಿಕೆಗಳು 'ಅದೇ ರಾಗ ಅದೇ ಹಾಡು' ಎಂಬಂತೆ ಎಂದಿನಂತೆ ಮೂಡಿಬಂದಿವೆ. ತನ್ನ ರುಚಿ ರುಚಿ ಚಟ್ನಿ, ಧಾರವಾಹಿಗಳು, ಕೆಲವೊಂದಿಷ್ಟು ರಾಜಕಾರಣ..ಹೀಗೆ ನಿತ್ಯ ರಾಗಗಳನ್ನು ಪುನರಾವರ್ತನೆ ಮಾಡಿವೆ.
ಹ್ಞಾಂ! ಹೇಳೋಕೆ ಮರೆತೆ.. ಮೊನ್ನೆ ಅಕ್ಟೋಬರ್ 2 ರಂದು ಏನು ವಿಶೇಷವಿತ್ತು? ಗಾಂಧಿ ಜಯಂತಿ. ಈಗ ತಾನೇ ಅ ಆ ಇ ಈ ಕಲಿಯೋಕೆ ಶುರು ಮಾಡಿದ ಪುಟ್ಟ ಮಗುವಿನಿಂದ ಹಿಡಿದು, ಆ ಪುಟ್ಟ ಮಗುವಿಗೆ ಕಲಿಸುವ 'ಟೀಚರ್' ತನಕ ಎಲ್ಲರಿಗೂ ಅಕ್ಟೋಬರ್ 2 ನಮ್ಮ ರಾಷ್ಟ್ರಪಿತ ಗಾಂಧಿತಾತನ ಹುಟ್ಟುಹಬ್ಬವೆಂದು ಚೆನ್ನಾಗಿ ಗೊತ್ತು.. ಗಾಂಧಿ ಜಯಂತಿ ನಿಮಿತ್ತ ತಾತನ ನೆನಪಲ್ಲಿ ಲಡ್ಡು, ಹೋಳಿಗೆ ಹಂಚಿ ತಿಂದು ಖುಷಿ ಪಟ್ಟಾಯಿತು.. ಅದ್ಸರಿ... ಗಾಂಧೀಜಿಯನ್ನು ನಾವು ಪೂಜಿಸಲೇಬೇಕು.
ಆದರೆ...ಇದೇ ಗಾಂಧಿತಾತನ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಭಾರತದ ಎರಡನೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಅಕ್ಟೋಬರ್ 2ರಂದು ಎಂದು ಯಾರಿಗಾದರೂ ನೆನಪಿದೆಯೇ? ಮಾಧ್ಯಮಗಳು ಆ ಕುರಿತಾದ ಕನಿಷ್ಟ ಕಾಳಜಿಯನ್ನೂ ತೋರಿಸಿಲ್ಲ. ಗಾಂಧಿ ಜಯಂತಿ ಪ್ರಯುಕ್ತ 'ವಿಕ್ರಾಂತ' ವಾರ ಪತ್ರಿಕೆಯಲ್ಲಿ ಪ್ರಸಕ್ತ ನಮ್ಮ ರಾಜಕೀಯದಲ್ಲಿ ಕೊಳೆತು ನಾರುತ್ತಿರುವ ಪುರಾಣ ಪ್ರಸಿದ್ಧ ರಾಮಸೇತು ಪ್ರಕರಣದೊಂದಿಗೆ ಗಾಂಧಿಯನ್ನು ಹೋಲಿಸಿ 'ಗಾಂಧೀಜಿಯ ರಾಮ v/s ರಾಜಕಾರಣದ ರಾಮ', ಇನ್ನೊಂದೆಡೆ ಗಾಂಧಿ ಮತ್ತು ರಾಜಕಾರಣ ಎಂದು ಪುಟಗಟ್ಟಲೆ ಬರೆದಿದ್ದರು. 'ಸುಧಾ'ದಲ್ಲಿ ಎಟರ್ನಲ್ ಗಾಂಧಿ... ಹೀಗೆ ಹಲವಾರು ಪತ್ರಿಕೆಗಳಲ್ಲಿ ಗಾಂಧಿ ನಡೆದ ಹಾದಿ-ಚಳುವಳಿ ಬಗ್ಗೆ ಬರದಿದ್ದನ್ನೇ ಬರೆದಿದ್ದರು. ಪಾಪ! ಅವರ ಕುರುಡು ಕಣ್ಣಿಗೆ ನಮ್ಮ ಶಾಸ್ತ್ರೀಜಿ ಹೋರಾಟ, ಚಳವಳಿ ಯಾವುದೂ ಕಣ್ಣಿಗೆ ಬಿದ್ದಿಲ್ಲ. ಎಲ್ಲೊ ಒಂದು ಮೂಲೆಯಲ್ಲಿ 'ಶಾಸ್ತ್ರಿ ಅವರ ಹುಟ್ಟುಹಬ್ಬ' ಎಂಬ ಎರಡು ಸಾಲು ಮಾತ್ರ ಕಂಡದ್ದು ಬಿಟ್ಟರೆ ಬೇರೇನೂ ಇಲ್ಲ. 'ದ ಸಂಡೆ ಇಂಡಿಯನ್' ತನ್ನ ವಿಶೇಷ ಸಂಚಿಕೆಯಲ್ಲಿ 60 ವರ್ಷದ ಪ್ರಮುಖ ಘಟನಾವಳಿಗಳ ನಡುವೆ 'ವಿದೇಶದಲ್ಲಿ ಸಾವುಂಡ ಏಕೈಕ ಪ್ರಧಾನಿ' ಎಂಬ ಚಿಕ್ಕ ಚೊಕ್ಕ ಲೇಖನ ಪ್ರಕಟಿಸಿತ್ತು. ಇನ್ನು ತರಂಗದಲ್ಲಿ ಶೃಂಗೇರಿ ಶಾರದಾಂಬೆ, ರಂಜಾನ್ ಮತ್ತು ಪುಟ ತುಂಬಿಸೋಕೆ 4 ಪುಟ ಮಸೀದಿಗಳ ಪೋಟೋಗಳು..ಈ ಮಂದೀರ, ಮಸೀದಿ ಬಿಟ್ಟು ತರಂಗ ಎಂದು ಹೊರಬರುವುದೋ?

ಸ್ವಾತಂತ್ರ್ಯ ಚಳುವಳಿಯಲ್ಲಿ ಒಂಬತ್ತು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ ಶಾಸ್ತ್ರೀಜಿ, ನಮ್ಮ ದೇಶ ಕಂಡ ಪ್ರಾಮಾಣಿಕ ಹಾಗೂ ಸರಳ ಜೀವಿ. ದೇಶಾಭಿಮಾನ, ಸ್ವಾಭಿಮಾನ ಇವರ ಹುಟ್ಟು ಬಳುವಳಿ. ಮರಣದ ನಂತರ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರ ಘೋಷ ವಾಕ್ಯಗಳಾದ 'ಜೈ ಕಿಸಾನ್, ಜೈ ಜವಾನ್ ' ಇಂದಿಗೂ ಭಾರತೀಯರ ಮನದಲ್ಲಿ ಚಿರಾಯುವಾಗಿದೆ. ಆದರೆ ನಮ್ಮ ಶಾಸ್ತ್ರೀಜಿ..?

"ಶಾಸ್ತ್ರಿ ಅವರು ಬದುಕಿ ಪ್ರಧಾನಿಯಾಗಿ ಮುಂದುವರೆಯುತ್ತಿದ್ದರೆ ನಮ್ಮ ರಾಷ್ಟ್ರದ ರಾಜಕೀಯ ಮತ್ತು ಪರಿಣಾಮವಾಗಿ ಸಾಮಾಜಿಕ ಮತ್ತು ವ್ಯಕ್ತಿಗತ ನೈತಿಕ ಮೌಲ್ಯಗಳು ಇಷ್ಟು ಪ್ರಪಾತಕ್ಕೆ ಇಳಿಯುತ್ತಿರಲಿಲ್ಲವೆಂಬುವುದು ನನ್ನ ನಂಬಿಕೆ" ಎನ್ನುತ್ತಾರೆ ಖ್ಯಾತ ಕಾದಂಬರಿಕಾರ ಎಸ್. ಎಲ್.ಭೈರಪ್ಪ.

ಆದರೆ ಇಂದು ಒಂದು ದಿನದ ಮಟ್ಟಿಗೂ ಅವರು ನಮಗೆ ನೆನಪಾಗುವುದಿಲ್ಲ. ಮಾಧ್ಯಮಗಳು ಸಮಾಜದ ಕೈಗನ್ನಡಿ, ಮುಖವಾಣಿ..ಮಾರ್ಗದರ್ಶಿ ಎಂದೆಲ್ಲಾ ಬೊಗಳೆ ಬಿಡುತ್ತೇವೆಲ್ಲಾ ಆದರೆ ಮಾಡುವುದೇನು? ಪತ್ರಿಕೆಗಳ ಕ್ರೀಡಾ ತಾರತಮ್ಯದ ಬಗ್ಗೆ ಮೊದಲೇ ಹೇಳಿದ್ದೆ.


"ಲೋಕದ ಕೊಳೆಯನ್ನು ಗುಡಿಸಿ ರೋಗರುಜಿನಗಳು ತಡೆಗಟ್ಟುವ ಶಕ್ತಿ ಸಾಧನಗಳಲ್ಲಿ ಪತ್ರಿಕೆಯೂ ಒಂದು. ಪತ್ರಿಕಾ ಶಕ್ತಿ ಸ್ವಧರ್ಮ ಬಾಹಿರವಾದಾಗ ಲೋಕಕ್ಕೆ ಕೇಡು ತಪ್ಪದು" ಎನ್ನುತ್ತಾರೆ ದೇ.ಜ.ಗೌ. ಅದೆಷ್ಟು ಸತ್ಯ. ನನಗಿನ್ನೂ ನೆನಪಿದೆ. ಕರ್ನಾಟಕದ ನಂ.1 ಪತ್ರಿಕೆಯ ಸಂಪಾದಕರೊಬ್ಬರು ನಮ್ಮ ಕಾಲೇಜಿಗೆ ಅಂದು ಭೇಟಿ ನೀಡಿದ್ದರು. ಆಗ ನಾವು ಅವರತ್ರ "ಸರ್, ಸಾನಿಯಾ ಮಿರ್ಜಾ ಸೋತ್ರೂ, ಗೆದ್ರೂ ಮುಖಪುಟದಲ್ಲಿಯೇ ಪ್ರಕಟಿಸುತ್ತಿರಲ್ಲಾ?" ಎಂದು ಕೇಳಿದೆವು. ಆ ಮನುಷ್ಯ ನಗುತ್ತಾ ಉತ್ರ ನೀಡಿದ್ದೇನು ಗೊತ್ತೇ? "ನೋಡ್ರೀ ನಮ್ ಪತ್ರಿಕೆ ಸೇಲ್ ಆಗಬೇಕಾದ್ರೆ ನಾವು ಅದನ್ನು ಮಾಡಲೇಬೇಕು. ಸಾನಿಯಾ ನೋಡೋಕೆ ಚೆನ್ನಾಗಿದ್ದಾಳೆ.. ಆದ್ರಿಂದ ಮೊದಲ ಪೇಜ್ ನಲ್ಲಿ ಪೋಟೋ ಹಾಕಿದ್ದೀವಿ... ಜನರು ಅವಳನ್ನು ನೋಡಿಯಾದರೂ ಪತ್ರಿಕೆ ಕೊಂಡುಕೊಳ್ಳುತ್ತಾರೆ"!!

ಸತ್ಯ ಬಿಡಿ. ಆದರೆ ಇದು ಪತ್ರಿಕಾ ಧರ್ಮವೇ? ಪ್ರಸಕ್ತ ಪರಿಸ್ಥಿತಿ ಹೇಗಿದೆ ಎಂದರೆ ನಮ್ಮ ರಾಷ್ಟ್ರೀಯ ದಿನಗಳು, ರಾಜಕಾರಣ ಎಲ್ಲವೂ ಯಾವುದೋ ಒಂದು ಕುಟುಂಬ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಶ್ ಚಂದ್ರ ಭೋಸ್, ಸಾವರ್ಕರ್, ಭಗತ್ ಸಿಂಗ್ ಯಾರೇ ಆಗಲಿ.. ಅವರ ನೆನಪು, ಧ್ಯೇಯ-ಆದರ್ಶ ಎಲ್ಲವೂ ಅಷ್ಟಕ್ಕಷ್ಟೇ. ಅದೇ ನೆಹರೂ, ಗಾಂಧೀ..ಕುಟುಂಬದ ಯಾರ ಸತ್ತ ಅಥವಾ ಹುಟ್ಟಿದ ದಿನಗಳಾಗಲೀ ನಮ್ಮ ಪತ್ರಿಕೆಗಳು ಮುಖಪುಟದಲ್ಲಿ ಅಚ್ಚೊತ್ತಿಬಿಡುತ್ತವೆ. ಪತ್ರಿಕೆ ಸಮಾಜವನ್ನು ತಿದ್ದಬೇಕು..ವಿನಹ ಸಮಾಜವನ್ನು ಮತ್ತಷ್ಟು ಹೀನಾಯ ಸ್ಥಿತಿಗೆ ಕೊಂಡೊಯ್ಯಬಾರದು. ಕೊಳೆತು ನಾರುವ ರಾಜಕೀಯ, ಈ ಹಿಂದೆ ಜನರಿಗೆ ವಾಕರಿಕೆ ಬರುವಷ್ಟು ಸಲ ಅದೇ ಬಿಸಿ ಬಿಸಿ ಮಸಾಲ ಮತ್ತು ಬೊಜ್ಜು ಕರಗಿಸೋದು, ದಿನದಲ್ಲಿ ಎಷ್ಟು ಬಾರಿ ಟಾಯ್ಲೆಟ್ಗೆ ಹೋಗಬೇಕು.. ಮುಂತಾದ ಡಾಕ್ಟ್ರು ಕೊಡುವ ಸಲಹೆಗಳನ್ನು ಕೊಡುವುದನ್ನು ಬಿಟ್ಟು ಬಿಟ್ಟು, ಸಮಾಜದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಯಾವುದು ಪೂರಕವೋ ಅದನ್ನು ನೀಡಬೇಕಾಗಿದೆ... ನೀವೇನಂತಿರಿ..?
ಚರ್ಚೆಗೆ ಸ್ವಾಗತ..

Friday, October 5, 2007

ನಾವು ಎಷ್ಟಂದ್ರೂ ಅಷ್ಟೆ ಬಿಡಿ!ಈ ಬಾರಿ ಯಾವುದೇ ಮ್ಯಾಗಜೀನ್ ತೆಗೆದು ನೋಡಿ. ಕ್ರಿಕೆಟ್ ಸುದ್ದಿ ಇಲ್ಲದೆ ಇದ್ರೆ ಕೇಳಿ. ಧೋನಿ ಕೈಯಲ್ಲಿ ಲಕ ಲಕ ಮಿಂಚುತ್ತಾ ಇರೋ ಟ್ವೆಂಟಿ-20 ವಿಶ್ವ ಕಪ್. ಒಂದರಲ್ಲಿ 'ಹ್ಯಾಟ್ಸಾಫ್ ಯಂಗ್ ಹಾರ್ಟ್ಸ್' ಅಂತಿದ್ದರೆ, ಇನ್ನೊಂದು ಕಡೆ 'ಶಹಭಾಸ್ ಟೀಮ್ ಇಂಡಿಯಾ' . ಮತ್ತೊಂದರಲ್ಲಿ '24 ವರ್ಷಗಳ ನಂತರ ವಿಜಯೋತ್ಸವ!' 'ಔಟ್ ಲುಕ್' ಅಂತೂ ವಿಶೇಷ ಸಂಚಿಕೆಗಳ ಮಧ್ಯದ ಪೇಜ್ ಇರುವಂತೆ ಒಂದು ಮಿರುಗುವ ದೊಡ್ಡ ಪೇಜ್ ಇಡೀ ಧೋನಿ ಪಡೆಯ ಫೋಟೋ ಹಾಕಿಬಿಟ್ಟಿತ್ತು! ಯಪ್ಪಾ..!

ವಿಶ್ವಕಪ್ ಗೆದ್ದಿರುವುದು ಖಂಡಿತ ಚಿಕ್ಕ ಸಾಧನೆಯಲ್ಲ. ಒಪ್ಪಿಕೊಳ್ಳೋಣ. ಆದರೆ ಒಂದು ಜಯದ ನಂತರ ಉಬ್ಬಿಹೋಗಿ ಮುಂದಿನ ಕರ್ತವ್ಯ ಮರೆಯುವುದರಲ್ಲಿ ನಾವು ನಿಸ್ಸೀಮರು. ಹೆಚ್ಚ್ಯಾಕೆ? ಟ್ವೆಂಟಿ-20ಯಲ್ಲಿ ಆಸ್ಟ್ರೇಲಿಯಾ ಸದೆ ಬಡಿದ ಇದೇ 'ಟೀಮ್ ಇಂಡಿಯಾ' ಈಗ ಆಸ್ಟ್ರೇಲಿಯಾ ಕೈಯಿಂದಲೇ ಹೊಡೆಸಿಕೊಳ್ಳುತ್ತಿದೆ. ಈ ಮೀಡಿಯಾಗಳೇ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಕೊಟ್ಟುಬಿಡುತ್ತವೆ ಅನ್ನೋದು ಖಂಡಿತ ಸುಳ್ಳಲ್ಲ. ಆದರೆ ಹಾಕಿಯಲ್ಲಿ ಭಾರತ ತಂಡ ಕೊರಿಯಾವನ್ನು 7-2 ರಿಂದ ಸದೆ ಬಡಿದಾಗ, ಫುಟ್ಬಾಲ್ನಲ್ಲಿ ನೆಹರೂ ಕಪ್ ಜಯಿಸಿ ಬಂದಾಗ ಇದೇ ಪ್ರಚಾರ ಯಾಕೆ ಸಿಕ್ಕಿಲ್ಲ?

ಇನ್ನು ನ್ಯೂಸ್ ಚಾನೆಲ್ ಕಥೆ ಕೇಳಲೇ ಬೇಡಿ. ಭಾರತಕ್ಕೆ ಮರಳಿದ ಕ್ರಿಕೆಟ್ ತಂಡಗಳ ಮೆರವಣಿಗೆಯನ್ನು ದಿನವಿಡೀ ಪ್ರಸಾರ ಮಾಡಿದ್ದವು. ಅವೇ ಚಾನೆಲ್ ಗಳು ಐಶ್-ಅಭಿ ಮದುವೆ ಸಂದರ್ಭವೂ ಹೀಗೆ ಮಾಡಿದ್ದವು. ನಾವು ಎಷ್ಟೇ ಬಡ್ಕೊಂಡ್ರೂ ಏನೂ ಆಗಲ್ಲ ಬಿಡಿ. ಯಾಕೆಂದ್ರೆ ಎಷ್ಟೇ ಹೇಳಿದ್ರೂ ನಮಗೂ ಇಂತಹ ಸುದ್ದಿಗಳೇ ಬೇಕಾಗಿರುವುದು. ಐಶ್ ಮದುವೆಗೆ ಕೆಂಪು ಸೀರೆ ಉಟ್ಟಿದ್ದೋ, ಹಸಿರೋ ಎನ್ನುವುದು ಕಾಶ್ಮೀರದಲ್ಲಿ ಮಡಿಯುತ್ತಿರುವ ಯೋಧರಿಗಿಂತ ಹೆಚ್ಚು ಮುಖ್ಯ ನಮಗೆ. ಅಯ್ಯೋ, ಈ ರಗಳೆ ಎಲ್ಲಾ ಯಾಕೆ, ಬಿಟ್ ಹಾಕಿ ಅಂದು ಸುಮ್ಮನಾದ್ರಾ?

Friday, September 28, 2007

ಕನ್ನಡ ನಿಯತಕಾಲಿಕಗಳ ಭವಿಷ್ಯ...?

ಮತ್ತೆ ಅದೇ ಹಳಸಿದ ಹಪ್ಪಳ, ದೋಸೆ, ಗೊಜ್ಜು ತಿಂದು ರೋಸಿ ಹೋಗಿದ್ದರೆ ಇಲ್ಲಿಗೊಮ್ಮೆ ಬನ್ನಿ. ಹೊಸತೊಂದು ಪಾಕವನ್ನು ಜೊತೆಯಲ್ಲಿ ಕೂತು ಸವಿಯೋಣ.

ನಿಮಗೇ ಗೊತ್ತಿರುವಂತೆ ಇತ್ತೀಚೆಗೆ ಕೌಟುಂಬಿಕ ಪತ್ರಿಕೆಗಳೇ ಕನ್ನಡದಲ್ಲಿ ಹೇರಳವಾಗಿ ಹೊರಬರುತ್ತಿವೆ. ಅಲ್ಲಿ ಗಂಭೀರ ಚರ್ಚೆಯ ಬದಲು ಫ್ಯಾಷನ್, ಹುಟ್ಟುಹಬ್ಬ, ಧಾರಾವಾಹಿ ಇಂತಹ ವಿಷಯಗಳಿಗೆ ಒತ್ತು ಜಾಸ್ತಿ. ಪ್ರಸ್ತುತ ವಿದ್ಯಮಾನಗಳನ್ನು ವಿಷದವಾಗಿ ತಿಳಿಸುವ 'ನ್ಯೂಸ್ ಮ್ಯಾಗಜೀನ್' ಕನ್ನಡದಲ್ಲಿ ಇಲ್ಲವೇ ಇಲ್ಲ.

ಆದರೆ ಈ ಕೊರತೆ ನೀಗಿಸಲೋ ಎಂಬಂತೆ ಕನ್ನಡದಲ್ಲಿ ಆಂಗ್ಲ ನಾಮಧೇಯ ಹೊತ್ತ 'ದ ಸಂಡೆ ಇಂಡಿಯನ್' ಎಂಬ ವಾರ ಪತ್ರಿಕೆ ಈಗ ಹೊರಬರುತ್ತಿದೆ. ಇಂಗ್ಲಿಷ್ ಮಸಾಲೆಗಳೇ ತುಂಬಿಕೊಂಡಿರುವ ವಾರ ಪತ್ರಿಕೆ ಎಂಬ ಎಣಿಕೆ ನನ್ನಲ್ಲಿತ್ತು. ಒಂದು ಬಾರಿ ಓದಿದಾಗಲೇ ಆ ಎಣಿಕೆ ತಪ್ಪು ಎಂಬುದು ತಿಳಿಯಿತು. ಕನ್ನಡ ಪತ್ರಿಕೆಗಳಿಗೆ ಹೊಸ ಸ್ಪರ್ಧೆ, ಹೊಸ ನೆಲಗಟ್ಟು ಸಿಗಬಹುದೇನೋ ಎಂಬ ಆಶಯ ಗರಿಗೆದರಿತು. ಸರಿ, ಕನ್ನಡ ನಿಯತ ಕಾಲಿಕಗಳ ಕುರಿತು ಚರ್ಚಿಸಲು ಒಂದು ವೇದಿಕೆ ಯಾಕೆ ಆರಂಭಿಸಬಾರದು ಎಂಬ ಪ್ರಶ್ನೆ ತಕ್ಷಣ ಮನದಲ್ಲಿ ಬಂತು. ಅದರ ಫಲವೇ ಈ ಬ್ಲಾಗ್. ನನ್ನ ಜತೆ ಸೇರಿ ಚರ್ಚಿಸಲು ಇಷ್ಟ ಪಡುವವರಿಗೆ ಈ ತಾಣಕ್ಕೆ ಸ್ವಾಗತ.