ಮೊನ್ನೆ ಮೊನ್ನೆ ಸುವರ್ಣ ರಾಜ್ಯೋತ್ಸವ ಆಚರಿಸಿ ಖುಷಿಪಟ್ಟಾಯಿತ್ತು. ಈಗ ಮತ್ತೆ ಬಂದಿದೆ 'ರಾಜ್ಯೋತ್ಸವ'..ಕನ್ನಡ ನಾಡಿನ ಹಬ್ಬ..ಕನ್ನಡಿಗರಾದ ನಮಗೆಲ್ಲಾ ಮನದೊಳಗೆ ಪುಳಕ.. ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿಗಳಿಗೇನು ಬರವಿಲ್ಲ. ಅರ್ಧಶತಕ್ಕಿಂತಲೂ ಹೆಚ್ಚು ಮಂದಿ ಸಾಧಕರು ರಾಜ್ಯೋತ್ಸವ ಪ್ರಶಸ್ತಿ ಪಡೆಯಲಿದ್ದಾರೆ. ಪ್ರತಿ ಬಾರಿಯೂ ಅಷ್ಟೇ ನಮ್ಮ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿ ದೊಡ್ಡದೇ ಇರುತ್ತದೆ. ಮಾತ್ರವಲ್ಲ ನಮ್ಮ ಕರ್ನಾಟಕ ಈ ವಿಷಯದಲ್ಲಿ ಎಂದಿಗೂ ಜಿಪುಣತನ ತೋರಿಸಿಲ್ಲ. ಸಿಕ್ಕಸಿಕ್ಕವರಿಗೆಲ್ಲಾ ಪ್ರಶಸ್ತಿ ನೀಡಿ ಶಹಭಾಸ್ ಗಿರಿ ಗಿಟ್ಟಿಸಿದೆ. ಹಾಗಂತ ಇವರೆಲ್ಲಾ ಪ್ರಶಸ್ತಿಗೆ ಅರ್ಹರಲ್ಲವೆಂದಲ್ಲ. ಆದರೆ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಸರ್ಕಾರ ಧುತ್ತನೆ ಎಚ್ಚೆತ್ತುಕೊಂಡು ಆತುರಾತುರದಿಂದ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿ ಬಿಡುತ್ತದೆ. ಆಗಲೇ ಗೊತ್ತು ಜನರಿಗೆ..ಓಹ್ ಇಷ್ಟು ಜನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು! ಆ ಸಾಧಕರ ಸಾಧನೆಯನ್ನು ಜನ ಹುಡುಕಾಡುವುದೂ ಆವಾಗಲೇ.. ಎಷ್ಟೋ ಬಾರಿ ಸರ್ಕಾರ ಮಹತ್ತರ ಸಾಧನೆ ಮಾಡಿದವರನ್ನೇ ಕಡೆಗಣಿಸಿದೆ, ಸರ್ಕಾರದ ಕ್ರಮ ಸರಿಯಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಮಾತ್ರವಲ್ಲ ಪ್ರಶಸ್ತಿಯ ಆಸೆಯಿಂದ ತಮ್ಮ ಹೆಸರು ನೋಂದಾಯಿಸಿ ಕೊನೆಗೆ ಪ್ರಶಸ್ತಿ ಸಿಗದೆ ಹತಾಶರಾಗಿ ಬೀದಿಗಿಳಿದ ಸನ್ನಿವೇಶಗಳು ಅದೆಷ್ಟೋ ಇವೆ.
ಹೀಗಿರುವಾಗ ಸರ್ಕಾರ ಸಾಧಕರನ್ನು ಗುರುತಿಸುವ ಕೆಲಸವನ್ನು ಜನಸಾಮಾನ್ಯರಿಗೆ ನೀಡಬೇಕು. ಮಹತ್ತರ ಸಾಧನೆ ಮಾಡಿದ ಎಂಥಹ ಮಹಾ ಸಾಧಕನಾದರೂ ಹಳ್ಳಿಯ ಸಾಮಾನ್ಯನಿಗೂ ಗೊತ್ತಿರುತ್ತದೆ. ಸರ್ಕಾರ ಈ ಕೆಲಸವನ್ನು ಜನರ ಕೈಗೆ ನೀಡಲಿ. ನಿಜವಾದ ಸಾಧಕನನ್ನು ಜನರು 'ಆಯ್ಕೆ' ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸರ್ಕಾರ ಈವರೆಗೆ ಆ ಬಗ್ಗೆ ಕಿಂಚಿತ್ತು ಯೋಚನೆಯೂ ಮಾಡಿಲ್ಲ. ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿ ಕೈತೊಳೆದುಕೊಂಡು ಸುಮ್ಮಿನಿರುತ್ತದೆ. ಪ್ರಶಸ್ತಿ ಪಡೆದವರು ಸಾಧಕರೋ ಅಥವ ಬಾಧಕರೋ ಪ್ರಶಸ್ತಿ ಕೊಟ್ಟರೆ ಸಾಕು..ಇದು ಸರ್ಕಾರದ ರೀತಿ.
ಪ್ರಶಸ್ತಿ-ಪುರಸ್ಕಾರ ಯಾವುದನ್ನೂ ಬಯಸದೆ ಸದ್ದಿಲ್ಲದ ಸಾಧಕರಾಗಿ ಮೆರೆದ ಅದೆಷ್ಟೋ ಮಹಾನುಭಾವರು ನಮ್ಮ ಸಮಾಜದಲ್ಲಿದ್ದಾರೆ. ಅವರೆಂದೂ ಪ್ರಚಾರ ಬಯಸುವುದಿಲ್ಲ. ಪ್ರಶಸ್ತಿಗಾಗಿ ತನ್ನ ಜೀವಮಾನದ 'ಸಾಧನೆ'ಗಳ ಪಟ್ಟಿಯನ್ನು ಸರ್ಕಾರದ ಮುಂದಿಟ್ಟು ಪ್ರಶಸ್ತಿ ನೀಡಿ ಎಂದು ಗೋಗರೆಯುವುದಿಲ್ಲ. ಸರ್ಕಾರ ಅವರಿಗೆ ಯಾವುದೇ ಮನ್ನಣೆ ನೀಡದಿದ್ದರೂ ಅವರೆಂದೂ ಬೀದಿಗಿಳಿದು ಪ್ರತಿಭಟನೆ ಮಾಡಿಲ್ಲ. ಆದರೆ ನಮ್ಮ ಸರ್ಕಾರ ಅಂಥವರನ್ನು ಹುಡುಕುವ ಪ್ರಯತ್ನ ಮಾಡಲ್ಲ. ಯಾಕೆಂದರೆ ಕುರ್ಚಿಗಾಗಿ ಕಿತ್ತಾಡುವ, ಅಧಿಕಾರ ಸಿಗಲೆಂದು ದೇಶದ ದೇವಸ್ಥಾನಗಳೆದುರು ಅಮಾಯಕರಂತೆ ಕೈಮುಗಿದು ದಿನವಿಡೀ ಪ್ರಾರ್ಥಿಸುವ, ಓಟಿಗಾಗಿ ಕೋಟಿಗಟ್ಟಲೆ 'ನೋಟು' ಖರ್ಚುಮಾಡಿ ವರ್ಷವಿಡೀ 'ಜಾಗೃತಿ' ಯಾತ್ರೆ ಕೈಗೊಳ್ಳುವ ನಮ್ಮನ್ನಾಳುವ 'ನಾಯಕರಿಗೆ' ಸಮಾಜದತ್ತ ಕಣ್ಣುಹಾಯಿಸಲು ಸಮಯವೆಲ್ಲಿದೆ ಹೇಳಿ?
ದಿನನಿತ್ಯ ಮಾಧ್ಯಮಗಳು ಈ ರೀತಿಯ ಲೇಖನಗಳನ್ನು ಪುಟಗಟ್ಟಲೇ ಬರೆಯುತ್ತಲೇ ಇರುತ್ತವೆ. 'ರಾಜಕೀಯ' ಕೊಳೆತು ನಾರಿದರೂ, ನಮ್ಮ ನಾಯಕ ಮಹಾಶಯರು ಬದಲಾಗಿಲ್ಲ ಅದು ಬೇರೆ ವಿಷಯ. ಆದ್ರೂ ಒಬ್ಬೇ ಒಬ್ಬ ನಾಯಕನಾದ್ರೂ ಸಮಾಜದತ್ತ ಕಣ್ಣೆತ್ತಿ ನೋಡಬಹುದೆಂಬ ಭರವಸೆಯಿಂದ ನಾವು ಬರೆಯುತ್ತಿದ್ದೇವೆ.
ಇರಲಿ..
ಕನ್ನಡಿಗರಾದ ಎಲ್ಲರಿಗೂ 'ನಾಡ ಹಬ್ಬ'ದ ಶುಭಾಶಯಗಳು
ಇದು ಕೇವಲ ಹಬ್ಬವಲ್ಲ..ನಮ್ಮನ್ನು ನಾವು ಅತ್ಮಾವಲೋಕನ ಮಾಡಿಕೊಳ್ಳುವ ಸಮಯ. ಕನ್ನಡಿಗರಾದ ನಾವು ಕನ್ನಡಕ್ಕೇನು ನೀಡಿದ್ದೇವೆ? ತಮ್ಮಿಂದ ಏನು ಕೊಡಲು ಸಾಧ್ಯ? ಕನ್ನಡ ಭಾಷೆ ಕೇವಲ ಭಾಷೆಯಲ್ಲ..ಕನ್ನಡ ನಮ್ಮಮ್ಮ..ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಬೇಕು..ಕನ್ನಡ ದೀಪ ಹಚ್ಚಬೇಕು..ಅದು ನಮ್ಮ ಮನೆ-ಮನಗಳನ್ನು ಬೆಳಗಬೇಕು.
'ಎಲ್ಲಾದರೂ ಇರು, ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು.."
*** *** *** ***
Subscribe to:
Post Comments (Atom)
No comments:
Post a Comment