Wednesday, October 10, 2007

'ಗಾಂಧಿ' ನಡುವೆ ಮರೆಯಾದ 'ಶಾಸ್ತ್ರೀಜಿ'


ಅದೇ ಮೊನ್ನೆ ಮೊನ್ನೆ ವಿಶ್ವಕಪ್ ಟ್ವೆಂಟಿ-20 ಸಂಭ್ರಮವನ್ನು ಪುಟಗಟ್ಟಲೆ ಗೀಚಿ, 'ಶಕ್ತಿ-ಭಕ್ತಿ'ಎಂದೆಲ್ಲಾ ಪೂಜಿಸಿದ ನಮ್ಮ ಈ ವಾರದ ವಾರಪತ್ರಿಕೆಗಳು 'ಅದೇ ರಾಗ ಅದೇ ಹಾಡು' ಎಂಬಂತೆ ಎಂದಿನಂತೆ ಮೂಡಿಬಂದಿವೆ. ತನ್ನ ರುಚಿ ರುಚಿ ಚಟ್ನಿ, ಧಾರವಾಹಿಗಳು, ಕೆಲವೊಂದಿಷ್ಟು ರಾಜಕಾರಣ..ಹೀಗೆ ನಿತ್ಯ ರಾಗಗಳನ್ನು ಪುನರಾವರ್ತನೆ ಮಾಡಿವೆ.
ಹ್ಞಾಂ! ಹೇಳೋಕೆ ಮರೆತೆ.. ಮೊನ್ನೆ ಅಕ್ಟೋಬರ್ 2 ರಂದು ಏನು ವಿಶೇಷವಿತ್ತು? ಗಾಂಧಿ ಜಯಂತಿ. ಈಗ ತಾನೇ ಅ ಆ ಇ ಈ ಕಲಿಯೋಕೆ ಶುರು ಮಾಡಿದ ಪುಟ್ಟ ಮಗುವಿನಿಂದ ಹಿಡಿದು, ಆ ಪುಟ್ಟ ಮಗುವಿಗೆ ಕಲಿಸುವ 'ಟೀಚರ್' ತನಕ ಎಲ್ಲರಿಗೂ ಅಕ್ಟೋಬರ್ 2 ನಮ್ಮ ರಾಷ್ಟ್ರಪಿತ ಗಾಂಧಿತಾತನ ಹುಟ್ಟುಹಬ್ಬವೆಂದು ಚೆನ್ನಾಗಿ ಗೊತ್ತು.. ಗಾಂಧಿ ಜಯಂತಿ ನಿಮಿತ್ತ ತಾತನ ನೆನಪಲ್ಲಿ ಲಡ್ಡು, ಹೋಳಿಗೆ ಹಂಚಿ ತಿಂದು ಖುಷಿ ಪಟ್ಟಾಯಿತು.. ಅದ್ಸರಿ... ಗಾಂಧೀಜಿಯನ್ನು ನಾವು ಪೂಜಿಸಲೇಬೇಕು.
ಆದರೆ...ಇದೇ ಗಾಂಧಿತಾತನ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಭಾರತದ ಎರಡನೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಅಕ್ಟೋಬರ್ 2ರಂದು ಎಂದು ಯಾರಿಗಾದರೂ ನೆನಪಿದೆಯೇ? ಮಾಧ್ಯಮಗಳು ಆ ಕುರಿತಾದ ಕನಿಷ್ಟ ಕಾಳಜಿಯನ್ನೂ ತೋರಿಸಿಲ್ಲ. ಗಾಂಧಿ ಜಯಂತಿ ಪ್ರಯುಕ್ತ 'ವಿಕ್ರಾಂತ' ವಾರ ಪತ್ರಿಕೆಯಲ್ಲಿ ಪ್ರಸಕ್ತ ನಮ್ಮ ರಾಜಕೀಯದಲ್ಲಿ ಕೊಳೆತು ನಾರುತ್ತಿರುವ ಪುರಾಣ ಪ್ರಸಿದ್ಧ ರಾಮಸೇತು ಪ್ರಕರಣದೊಂದಿಗೆ ಗಾಂಧಿಯನ್ನು ಹೋಲಿಸಿ 'ಗಾಂಧೀಜಿಯ ರಾಮ v/s ರಾಜಕಾರಣದ ರಾಮ', ಇನ್ನೊಂದೆಡೆ ಗಾಂಧಿ ಮತ್ತು ರಾಜಕಾರಣ ಎಂದು ಪುಟಗಟ್ಟಲೆ ಬರೆದಿದ್ದರು. 'ಸುಧಾ'ದಲ್ಲಿ ಎಟರ್ನಲ್ ಗಾಂಧಿ... ಹೀಗೆ ಹಲವಾರು ಪತ್ರಿಕೆಗಳಲ್ಲಿ ಗಾಂಧಿ ನಡೆದ ಹಾದಿ-ಚಳುವಳಿ ಬಗ್ಗೆ ಬರದಿದ್ದನ್ನೇ ಬರೆದಿದ್ದರು. ಪಾಪ! ಅವರ ಕುರುಡು ಕಣ್ಣಿಗೆ ನಮ್ಮ ಶಾಸ್ತ್ರೀಜಿ ಹೋರಾಟ, ಚಳವಳಿ ಯಾವುದೂ ಕಣ್ಣಿಗೆ ಬಿದ್ದಿಲ್ಲ. ಎಲ್ಲೊ ಒಂದು ಮೂಲೆಯಲ್ಲಿ 'ಶಾಸ್ತ್ರಿ ಅವರ ಹುಟ್ಟುಹಬ್ಬ' ಎಂಬ ಎರಡು ಸಾಲು ಮಾತ್ರ ಕಂಡದ್ದು ಬಿಟ್ಟರೆ ಬೇರೇನೂ ಇಲ್ಲ. 'ದ ಸಂಡೆ ಇಂಡಿಯನ್' ತನ್ನ ವಿಶೇಷ ಸಂಚಿಕೆಯಲ್ಲಿ 60 ವರ್ಷದ ಪ್ರಮುಖ ಘಟನಾವಳಿಗಳ ನಡುವೆ 'ವಿದೇಶದಲ್ಲಿ ಸಾವುಂಡ ಏಕೈಕ ಪ್ರಧಾನಿ' ಎಂಬ ಚಿಕ್ಕ ಚೊಕ್ಕ ಲೇಖನ ಪ್ರಕಟಿಸಿತ್ತು. ಇನ್ನು ತರಂಗದಲ್ಲಿ ಶೃಂಗೇರಿ ಶಾರದಾಂಬೆ, ರಂಜಾನ್ ಮತ್ತು ಪುಟ ತುಂಬಿಸೋಕೆ 4 ಪುಟ ಮಸೀದಿಗಳ ಪೋಟೋಗಳು..ಈ ಮಂದೀರ, ಮಸೀದಿ ಬಿಟ್ಟು ತರಂಗ ಎಂದು ಹೊರಬರುವುದೋ?

ಸ್ವಾತಂತ್ರ್ಯ ಚಳುವಳಿಯಲ್ಲಿ ಒಂಬತ್ತು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ ಶಾಸ್ತ್ರೀಜಿ, ನಮ್ಮ ದೇಶ ಕಂಡ ಪ್ರಾಮಾಣಿಕ ಹಾಗೂ ಸರಳ ಜೀವಿ. ದೇಶಾಭಿಮಾನ, ಸ್ವಾಭಿಮಾನ ಇವರ ಹುಟ್ಟು ಬಳುವಳಿ. ಮರಣದ ನಂತರ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರ ಘೋಷ ವಾಕ್ಯಗಳಾದ 'ಜೈ ಕಿಸಾನ್, ಜೈ ಜವಾನ್ ' ಇಂದಿಗೂ ಭಾರತೀಯರ ಮನದಲ್ಲಿ ಚಿರಾಯುವಾಗಿದೆ. ಆದರೆ ನಮ್ಮ ಶಾಸ್ತ್ರೀಜಿ..?

"ಶಾಸ್ತ್ರಿ ಅವರು ಬದುಕಿ ಪ್ರಧಾನಿಯಾಗಿ ಮುಂದುವರೆಯುತ್ತಿದ್ದರೆ ನಮ್ಮ ರಾಷ್ಟ್ರದ ರಾಜಕೀಯ ಮತ್ತು ಪರಿಣಾಮವಾಗಿ ಸಾಮಾಜಿಕ ಮತ್ತು ವ್ಯಕ್ತಿಗತ ನೈತಿಕ ಮೌಲ್ಯಗಳು ಇಷ್ಟು ಪ್ರಪಾತಕ್ಕೆ ಇಳಿಯುತ್ತಿರಲಿಲ್ಲವೆಂಬುವುದು ನನ್ನ ನಂಬಿಕೆ" ಎನ್ನುತ್ತಾರೆ ಖ್ಯಾತ ಕಾದಂಬರಿಕಾರ ಎಸ್. ಎಲ್.ಭೈರಪ್ಪ.

ಆದರೆ ಇಂದು ಒಂದು ದಿನದ ಮಟ್ಟಿಗೂ ಅವರು ನಮಗೆ ನೆನಪಾಗುವುದಿಲ್ಲ. ಮಾಧ್ಯಮಗಳು ಸಮಾಜದ ಕೈಗನ್ನಡಿ, ಮುಖವಾಣಿ..ಮಾರ್ಗದರ್ಶಿ ಎಂದೆಲ್ಲಾ ಬೊಗಳೆ ಬಿಡುತ್ತೇವೆಲ್ಲಾ ಆದರೆ ಮಾಡುವುದೇನು? ಪತ್ರಿಕೆಗಳ ಕ್ರೀಡಾ ತಾರತಮ್ಯದ ಬಗ್ಗೆ ಮೊದಲೇ ಹೇಳಿದ್ದೆ.


"ಲೋಕದ ಕೊಳೆಯನ್ನು ಗುಡಿಸಿ ರೋಗರುಜಿನಗಳು ತಡೆಗಟ್ಟುವ ಶಕ್ತಿ ಸಾಧನಗಳಲ್ಲಿ ಪತ್ರಿಕೆಯೂ ಒಂದು. ಪತ್ರಿಕಾ ಶಕ್ತಿ ಸ್ವಧರ್ಮ ಬಾಹಿರವಾದಾಗ ಲೋಕಕ್ಕೆ ಕೇಡು ತಪ್ಪದು" ಎನ್ನುತ್ತಾರೆ ದೇ.ಜ.ಗೌ. ಅದೆಷ್ಟು ಸತ್ಯ. ನನಗಿನ್ನೂ ನೆನಪಿದೆ. ಕರ್ನಾಟಕದ ನಂ.1 ಪತ್ರಿಕೆಯ ಸಂಪಾದಕರೊಬ್ಬರು ನಮ್ಮ ಕಾಲೇಜಿಗೆ ಅಂದು ಭೇಟಿ ನೀಡಿದ್ದರು. ಆಗ ನಾವು ಅವರತ್ರ "ಸರ್, ಸಾನಿಯಾ ಮಿರ್ಜಾ ಸೋತ್ರೂ, ಗೆದ್ರೂ ಮುಖಪುಟದಲ್ಲಿಯೇ ಪ್ರಕಟಿಸುತ್ತಿರಲ್ಲಾ?" ಎಂದು ಕೇಳಿದೆವು. ಆ ಮನುಷ್ಯ ನಗುತ್ತಾ ಉತ್ರ ನೀಡಿದ್ದೇನು ಗೊತ್ತೇ? "ನೋಡ್ರೀ ನಮ್ ಪತ್ರಿಕೆ ಸೇಲ್ ಆಗಬೇಕಾದ್ರೆ ನಾವು ಅದನ್ನು ಮಾಡಲೇಬೇಕು. ಸಾನಿಯಾ ನೋಡೋಕೆ ಚೆನ್ನಾಗಿದ್ದಾಳೆ.. ಆದ್ರಿಂದ ಮೊದಲ ಪೇಜ್ ನಲ್ಲಿ ಪೋಟೋ ಹಾಕಿದ್ದೀವಿ... ಜನರು ಅವಳನ್ನು ನೋಡಿಯಾದರೂ ಪತ್ರಿಕೆ ಕೊಂಡುಕೊಳ್ಳುತ್ತಾರೆ"!!

ಸತ್ಯ ಬಿಡಿ. ಆದರೆ ಇದು ಪತ್ರಿಕಾ ಧರ್ಮವೇ? ಪ್ರಸಕ್ತ ಪರಿಸ್ಥಿತಿ ಹೇಗಿದೆ ಎಂದರೆ ನಮ್ಮ ರಾಷ್ಟ್ರೀಯ ದಿನಗಳು, ರಾಜಕಾರಣ ಎಲ್ಲವೂ ಯಾವುದೋ ಒಂದು ಕುಟುಂಬ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಶ್ ಚಂದ್ರ ಭೋಸ್, ಸಾವರ್ಕರ್, ಭಗತ್ ಸಿಂಗ್ ಯಾರೇ ಆಗಲಿ.. ಅವರ ನೆನಪು, ಧ್ಯೇಯ-ಆದರ್ಶ ಎಲ್ಲವೂ ಅಷ್ಟಕ್ಕಷ್ಟೇ. ಅದೇ ನೆಹರೂ, ಗಾಂಧೀ..ಕುಟುಂಬದ ಯಾರ ಸತ್ತ ಅಥವಾ ಹುಟ್ಟಿದ ದಿನಗಳಾಗಲೀ ನಮ್ಮ ಪತ್ರಿಕೆಗಳು ಮುಖಪುಟದಲ್ಲಿ ಅಚ್ಚೊತ್ತಿಬಿಡುತ್ತವೆ. ಪತ್ರಿಕೆ ಸಮಾಜವನ್ನು ತಿದ್ದಬೇಕು..ವಿನಹ ಸಮಾಜವನ್ನು ಮತ್ತಷ್ಟು ಹೀನಾಯ ಸ್ಥಿತಿಗೆ ಕೊಂಡೊಯ್ಯಬಾರದು. ಕೊಳೆತು ನಾರುವ ರಾಜಕೀಯ, ಈ ಹಿಂದೆ ಜನರಿಗೆ ವಾಕರಿಕೆ ಬರುವಷ್ಟು ಸಲ ಅದೇ ಬಿಸಿ ಬಿಸಿ ಮಸಾಲ ಮತ್ತು ಬೊಜ್ಜು ಕರಗಿಸೋದು, ದಿನದಲ್ಲಿ ಎಷ್ಟು ಬಾರಿ ಟಾಯ್ಲೆಟ್ಗೆ ಹೋಗಬೇಕು.. ಮುಂತಾದ ಡಾಕ್ಟ್ರು ಕೊಡುವ ಸಲಹೆಗಳನ್ನು ಕೊಡುವುದನ್ನು ಬಿಟ್ಟು ಬಿಟ್ಟು, ಸಮಾಜದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಯಾವುದು ಪೂರಕವೋ ಅದನ್ನು ನೀಡಬೇಕಾಗಿದೆ... ನೀವೇನಂತಿರಿ..?
ಚರ್ಚೆಗೆ ಸ್ವಾಗತ..

1 comment:

Unknown said...

ಅರ್ಚನಾ ಅವರೇ '
ನಿಮ್ ಬ್ಲಾಗ್ ಚೆನ್ನಾಗಿದೆ. ಉತ್ತಮ ವಿಷಯ ಆರಿಸಿಕೊಂಡಿದ್ದೀರಿ. ಹೌದು! ನೀವಂದಂತೆ ನಮ್ಮ ಪತ್ರಿಕೆಗಳ ಮಲತಾಯಿ ಧೋರಣೆ ನಿಲ್ಲಬೇಕು...ಪತ್ರಿಕೆಗಳ ಸರಿ-ತಪ್ಪುಗಳ ಕುರಿತಾದ ಚರ್ಚೆಗೆ ನಿಮ್ ಬ್ಲಾಗ್ ನಲ್ಲಿ ಚರ್ಚೆಯಾಗುತ್ತರುವುದು ತುಂಬಾ ಸಂತೋಷ. ಹಾಟ್ಸ್ ಆಫ್! ಮುಂದುವರೆಸಿ